HomeBengaluru Newsಬೆಂಗಳೂರಿನ ಖಾಲಿ ನಿವೇಶನದ ಮಾಲೀಕರಿಗೆ GBA ಬಿಗ್ ಶಾಕ್! ಸ್ವಚ್ಛಗೊಳಿಸದಿದ್ದರೆ 1 ಲಕ್ಷ ರೂ ವರೆಗೆ...

ಬೆಂಗಳೂರಿನ ಖಾಲಿ ನಿವೇಶನದ ಮಾಲೀಕರಿಗೆ GBA ಬಿಗ್ ಶಾಕ್! ಸ್ವಚ್ಛಗೊಳಿಸದಿದ್ದರೆ 1 ಲಕ್ಷ ರೂ ವರೆಗೆ ದಂಡ

For Dai;y Updates Join Our whatsapp Group

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಖಾಲಿ ನಿವೇಶನಗಳಲ್ಲಿ ಕಸ ಸುರಿಯುವುದು ಹಾಗೂ ತ್ಯಾಜ್ಯ ಸಂಗ್ರಹವಾಗುತ್ತಿರುವ ಸಮಸ್ಯೆಗೆ ಕಡಿವಾಣ ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಕ್ರಮ ಕೈಗೊಂಡಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರ ಸೂಚನೆ ಮೇರೆಗೆ ಆಗಸ್ಟ್ ತಿಂಗಳಿನಿಂದ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಆರಂಭವಾಗಲಿದ್ದು, ನಗರದ ಸ್ವಚ್ಛತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ.

ಅಭಿಯಾನದ ಭಾಗವಾಗಿ ನಗರದ ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್‌ಗಳು, ಕಟ್ಟಡ ನಿರ್ಮಾಣ ತ್ಯಾಜ್ಯ, ರಸ್ತೆ ಬದಿಯ ಮರದ ಕೊಂಬೆಗಳು, ಬಿದ್ದಿರುವ ವಿದ್ಯುತ್ ಕಂಬಗಳು ಹಾಗೂ ಪೈಪ್‌ಗಳನ್ನು ಸಾಮೂಹಿಕವಾಗಿ ತೆರವುಗೊಳಿಸಲು ಪಾಲಿಕೆಗಳು ಮುಂದಾಗಿವೆ. ಜೊತೆಗೆ ನಗರದಲ್ಲಿರುವ ಎಲ್ಲಾ ಖಾಲಿ ನಿವೇಶನಗಳ ಮಾಲೀಕರಿಗೆ ಆಗಸ್ಟ್ 15ರವರೆಗೆ ಗಡುವು ನೀಡಲಾಗಿದೆ.

ನಿಗದಿತ ಅವಧಿಯೊಳಗೆ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸದಿದ್ದರೆ, ಪಾಲಿಕೆಯೇ ತ್ಯಾಜ್ಯ ತೆರವುಗೊಳಿಸಲಿದೆ. ಆದರೆ ಅದಕ್ಕೆ ತಗುಲುವ ಸಂಪೂರ್ಣ ವೆಚ್ಚವನ್ನು ನಿವೇಶನದ ವಿಸ್ತೀರ್ಣ ಹಾಗೂ ತೆರವುಗೊಳಿಸಿದ ತ್ಯಾಜ್ಯದ ಪ್ರಮಾಣದ ಆಧಾರದ ಮೇಲೆ ಸಂಬಂಧಿತ ಮಾಲೀಕರಿಂದಲೇ ವಸೂಲಿ ಮಾಡಲಾಗುತ್ತದೆ.

ಘನತ್ಯಾಜ್ಯ ನಿರ್ವಹಣಾ ಉಪವಿಧಿಗಳು–2020 ಹಾಗೂ ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ–2024ರ ಅನ್ವಯ ಈ ವೆಚ್ಚವನ್ನು ಆಸ್ತಿ ತೆರಿಗೆಯೊಂದಿಗೆ ಸೇರಿಸಿ ವಸೂಲಿ ಮಾಡಲು ನಿರ್ಧರಿಸಲಾಗಿದೆ.

ಒಂದು ವೇಳೆ ಈ ಮೊತ್ತವನ್ನು ಪಾವತಿಸದಿದ್ದರೆ, ಕರ್ನಾಟಕ ಭೂಕಂದಾಯ ಕಾಯ್ದೆ–1964ರ ಅನ್ವಯ ಕಠಿಣ ವಸೂಲಾತಿ ಕ್ರಮ ಜರುಗಿಸಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿಯಮ ಉಲ್ಲಂಘಿಸುವ ನಿವೇಶನ ಮಾಲೀಕರಿಗೆ ದಂಡವೂ ವಿಧಿಸಲಾಗುತ್ತದೆ. ಮೊದಲ ಬಾರಿಗೆ ಉಲ್ಲಂಘನೆ ಕಂಡುಬಂದರೆ ₹25,000 ದಂಡ ವಿಧಿಸಲಾಗುತ್ತದೆ. ನಂತರವೂ ನಿಯಮ ಪಾಲಿಸದಿದ್ದರೆ ₹50,000 ರಿಂದ ₹1 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ.

ಇದರ ಜೊತೆಗೆ, ನಿವೇಶನ ಸ್ವಚ್ಛಗೊಳಿಸಿದ ಬಳಿಕ ಮತ್ತೆ ಕಸ ಸುರಿಯದಂತೆ ಸುತ್ತಲೂ ಬೇಲಿ ಅಥವಾ ಕಾಂಪೌಂಡ್ ಗೋಡೆ ನಿರ್ಮಿಸಿ ನಿರ್ವಹಿಸುವ ಜವಾಬ್ದಾರಿಯೂ ನಿವೇಶನ ಮಾಲೀಕರದ್ದೇ ಆಗಿರಲಿದೆ.

ಇನ್ನು ಸಾರ್ವಜನಿಕರಿಗೂ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ. ಆಗಸ್ಟ್ 15ರೊಳಗೆ ಖಾಲಿ ನಿವೇಶನವನ್ನು ಸ್ವಚ್ಛಗೊಳಿಸದಿದ್ದರೆ, ಸಾರ್ವಜನಿಕರು ಆ ನಿವೇಶನದ ಛಾಯಾಚಿತ್ರ ಹಾಗೂ GPS ಸ್ಥಳ ಮಾಹಿತಿಯೊಂದಿಗೆ 9448197197 ಸಂಖ್ಯೆಗೆ ವಾಟ್ಸ್‌ಆಪ್ ಮೂಲಕ ದೂರು ಸಲ್ಲಿಸಬಹುದು. ದೂರುದಾರರ ವಿವರವನ್ನು ಗೌಪ್ಯವಾಗಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ, ನಗರದಲ್ಲಿನ ಖಾಲಿ ನಿವೇಶನಗಳನ್ನು ಕಸದ ತಾಣವನ್ನಾಗಿ ಬಿಡುವ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದು, ನಿಯಮ ಪಾಲಿಸದಿದ್ದರೆ ದಂಡ ಹಾಗೂ ವೆಚ್ಚ ಎರಡನ್ನೂ ಭರಿಸಬೇಕಾಗುವ ಪರಿಸ್ಥಿತಿ ಎದುರಾಗಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img