ಭಾರತ ತಂಡದ ಅನುಭವಿ ಬ್ಯಾಟರ್ ಅಜಿಂಕ್ಯ ರಹಾನೆ ಅಂತರರಾಷ್ಟ್ರೀಯ ಹಾಗೂ ಎಲ್ಲಾ ಮಾದರಿಯ ಕ್ರಿಕೆಟ್ಗೆ ಅಧಿಕೃತವಾಗಿ ವಿದಾಯ ಹೇಳಿದ್ದು, ಭಾರತೀಯ ಕ್ರಿಕೆಟ್ನ ಒಂದು ಸ್ಮರಣೀಯ ಅಧ್ಯಾಯ ಅಂತ್ಯಗೊಂಡಿದೆ. ಕಳೆದ ಮೂರು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಮರಳಲು ಪ್ರಯತ್ನಿಸಿದರೂ ಅವಕಾಶ ಸಿಗದ ಹಿನ್ನೆಲೆಯಲ್ಲಿ 38 ವರ್ಷದ ರಹಾನೆ ತಮ್ಮ ಕ್ರಿಕೆಟ್ ಬದುಕಿಗೆ ತೆರೆ ಎಳೆದಿದ್ದಾರೆ.
ಭಾರತದ ಪರ 85 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ, ಆರು ಟೆಸ್ಟ್ಗಳಲ್ಲಿ ನಾಯಕತ್ವ ವಹಿಸಿದ್ದರು. ಮುಂಬೈ ಪರ ದೇಶೀಯ ಕ್ರಿಕೆಟ್ನಲ್ಲಿ ಹಲವು ವರ್ಷಗಳ ಕಾಲ ಮಿಂಚಿದ ಅವರು, ಸಂಕಷ್ಟದ ಸಂದರ್ಭಗಳಲ್ಲಿ ಭಾರತ ತಂಡದ ನಂಬಿಗಸ್ತ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ರಹಾನೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಕ್ರಿಕೆಟ್ ದಿಗ್ಗಜರು ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಜಾಲತಾಣಗಳ ಮೂಲಕ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. “ನಿಮ್ಮ ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು ಅಜಿಂಕ್ಯ. ನಾವು ಮೊದಲ ಬಾರಿಗೆ ಮುಂಬೈ ಪರ ಜೊತೆಯಾಗಿ ಬ್ಯಾಟಿಂಗ್ ಮಾಡಿದಾಗಲೇ, ಅವಕಾಶಗಳ ಹಿಂದೆ ಓಡುವ ವ್ಯಕ್ತಿಯಲ್ಲ, ಅವಕಾಶಗಳನ್ನು ತನ್ನತ್ತ ಸೆಳೆಯುವ ಆಟಗಾರನನ್ನು ನಾನು ನಿನ್ನಲ್ಲಿ ಕಂಡಿದ್ದೆ.
ತಂಡಕ್ಕಾಗಿ ದುಡಿಯುವ ನಿನ್ನ ಮನೋಭಾವವೇ ನಿನ್ನನ್ನು ಈ ಮಟ್ಟಕ್ಕೆ ಕರೆತಂದಿತು. ತಾಳ್ಮೆ ಮತ್ತು ಆತ್ಮವಿಶ್ವಾಸದ ಮೂಲಕ ನೀನು ತಂಡಕ್ಕೆ ಬಲ ನೀಡಿದ್ದೆ. ನಿನ್ನ ಅದ್ಭುತ ವೃತ್ತಿಜೀವನಕ್ಕೆ ಮತ್ತೊಮ್ಮೆ ಅಭಿನಂದನೆಗಳು,” ಎಂದು ಸಚಿನ್ ಬರೆದುಕೊಂಡಿದ್ದಾರೆ.
ಇನ್ನೊಂದೆಡೆ, ರಹಾನೆ ಜೊತೆ ಹಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿದ ವಿರಾಟ್ ಕೊಹ್ಲಿ ಕೂಡ ವಿಶೇಷ ಸಂದೇಶದ ಮೂಲಕ ತಮ್ಮ ಸ್ನೇಹಿತನಿಗೆ ಶುಭ ಕೋರಿದ್ದಾರೆ. “ಜಿಂಕ್ಸ್, ಅದ್ಭುತ ವೃತ್ತಿಜೀವನಕ್ಕೆ ಅಭಿನಂದನೆಗಳು. ಭಾರತೀಯ ಕ್ರಿಕೆಟ್ಗಾಗಿ ನೀನು ನೀಡಿರುವ ಕೊಡುಗೆ ಅಮೂಲ್ಯ.
ನಿನ್ನ ಸಾಧನೆಯ ಬಗ್ಗೆ ಸದಾ ಹೆಮ್ಮೆಪಡಬಹುದು. ಸ್ಲಿಪ್ನಲ್ಲಿ ಅತ್ಯಂತ ವಿಶ್ವಾಸಾರ್ಹ ಫೀಲ್ಡರ್ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ನನ್ನ ನೆಚ್ಚಿನ ಬ್ಯಾಟಿಂಗ್ ಸಂಗಾತಿ ನೀನೇ. ದೇವರು ನಿನ್ನ ಮುಂದಿನ ಜೀವನವನ್ನು ಸುಖಮಯವಾಗಿರಿಸಲಿ,” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ರಹಾನೆಯ ಸೇವೆಯನ್ನು ಸ್ಮರಿಸಿ ವಿಶೇಷ ಸಂದೇಶ ಪ್ರಕಟಿಸಿದೆ. “ಒಂದು ಅದ್ಭುತ ಕ್ರಿಕೆಟ್ ವೃತ್ತಿಜೀವನಕ್ಕೆ ಇಂದು ತೆರೆ ಬಿದ್ದಿದೆ. ಭಾರತೀಯ ಕ್ರಿಕೆಟ್ಗೆ ನೀಡಿದ ಅಮೂಲ್ಯ ಸೇವೆ ಹಾಗೂ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಉಳಿಯುವ ಅನೇಕ ಸ್ಮರಣೀಯ ಕ್ಷಣಗಳಿಗಾಗಿ ಧನ್ಯವಾದಗಳು. ನಿಮ್ಮ ಮುಂದಿನ ಜೀವನಕ್ಕೆ ಹಾರ್ದಿಕ ಶುಭಾಶಯಗಳು,” ಎಂದು ಬಿಸಿಸಿಐ ತಿಳಿಸಿದೆ.
ಅಜಿಂಕ್ಯ ರಹಾನೆ ತಮ್ಮ ಶಾಂತ ಸ್ವಭಾವ, ತಾಳ್ಮೆಯ ಬ್ಯಾಟಿಂಗ್ ಹಾಗೂ ನಾಯಕತ್ವದ ಮೂಲಕ ಭಾರತೀಯ ಕ್ರಿಕೆಟ್ನಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದರು. ವಿಶೇಷವಾಗಿ 2020–21ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತವನ್ನು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನತ್ತ ಮುನ್ನಡೆಸಿದ ಅವರ ನಾಯಕತ್ವ ಇಂದಿಗೂ ಭಾರತೀಯ ಕ್ರಿಕೆಟ್ನ ಸುವರ್ಣ ಕ್ಷಣಗಳಲ್ಲಿ ಒಂದಾಗಿ ನೆನಪಾಗುತ್ತದೆ. ಅವರ ನಿವೃತ್ತಿಯೊಂದಿಗೆ ಭಾರತೀಯ ಕ್ರಿಕೆಟ್ನ ವಿಶ್ವಾಸಾರ್ಹ ಮಧ್ಯಮ ಕ್ರಮಾಂಕದ ಬ್ಯಾಟರ್ಗಳ ಯುಗವೊಂದು ಅಧಿಕೃತವಾಗಿ ಅಂತ್ಯಗೊಂಡಿದೆ.



