ಚೆನ್ನೈ: ದಳಪತಿ ವಿಜಯ್ ಅವರ ಪುತ್ರ ಎಂಬ ಗುರುತನ್ನು ಮೀರಿ ಸ್ವಂತ ಹೆಜ್ಜೆ ಇಡಲು ಮುಂದಾಗಿರುವ ಜೇಸನ್ ಸಂಜಯ್, ನಿರ್ದೇಶಕರಾಗಿ ಚಿತ್ರರಂಗಕ್ಕೆ ಅಧಿಕೃತ ಪ್ರವೇಶ ಮಾಡಿದ್ದಾರೆ. ಸುದೀಪ್ ಕಿಶನ್ ನಟನೆಯ ‘ಸಿಗ್ಮಾ’ ಚಿತ್ರದ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರುವ ಅವರು, ಮೊದಲ ಸಂದರ್ಶನದಲ್ಲೇ ತಂದೆ ವಿಜಯ್ ಜೊತೆಗಿನ ಕನಸಿನ ಸಿನಿಮಾ, ತಮ್ಮ ವೃತ್ತಿಜೀವನದ ಆಯ್ಕೆ ಹಾಗೂ ವಿದೇಶದಲ್ಲಿ ಪಡೆದ ಅನುಭವಗಳ ಬಗ್ಗೆ ಮನಮುಟ್ಟುವಂತೆ ಮಾತನಾಡಿದ್ದಾರೆ.
ಹಾಲಿವುಡ್ನ ಆಕ್ಷನ್ ಸೂಪರ್ಸ್ಟಾರ್ ಜೇಸನ್ ಸ್ಟೇಥಮ್ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಯಾವ ತಮಿಳು ನಟನನ್ನು ಆಯ್ಕೆ ಮಾಡುತ್ತೀರಿ ಎಂಬ ಪ್ರಶ್ನೆಗೆ ಜೇಸನ್ ಸಂಜಯ್, “ನನ್ನ ತಂದೆ ವಿಜಯ್ ಅವರನ್ನೇ ಆಯ್ಕೆ ಮಾಡುತ್ತೇನೆ. ಅವರಿಬ್ಬರ ಜೋಡಿ ಪರದೆ ಮೇಲೆ ಅದ್ಭುತವಾಗಿ ಮೂಡಿಬರಲಿದೆ” ಎಂದು ಆತ್ಮವಿಶ್ವಾಸದಿಂದ ಉತ್ತರಿಸಿದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಬಹುದು ಎಂದು ಅವರು ನಗುತ್ತಲೇ ಪ್ರತಿಕ್ರಿಯಿಸಿದರು.
ನಟನಾಗಿ ಸುಲಭವಾಗಿ ಚಿತ್ರರಂಗಕ್ಕೆ ಕಾಲಿಡುವ ಅವಕಾಶ ಇದ್ದರೂ, ನಿರ್ದೇಶನವೇ ತಮ್ಮ ಗುರಿಯಾಗಿತ್ತು ಎಂದು ಜೇಸನ್ ಸ್ಪಷ್ಟಪಡಿಸಿದರು. ಬಾಲ್ಯದಲ್ಲೇ ಸಿನಿಮಾ ಸೆಟ್ಗಳಲ್ಲಿ ಬೆಳೆದ ಅನುಭವ, ನಂತರ ಕಥೆ ಬರವಣಿಗೆಯ ಮೇಲಿನ ಆಸಕ್ತಿ ಮತ್ತು ಅದಕ್ಕಾಗಿ ಕೆನಡಾದಲ್ಲಿ ಪಡೆದ ವೃತ್ತಿಪರ ತರಬೇತಿ ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ಹೇಳಿದರು.
ಕೆನಡಾದಲ್ಲಿ ಓದುತ್ತಿದ್ದ ವೇಳೆ ಜಾಹೀರಾತು ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದು, ಸ್ಟಾರ್ಟ್ಅಪ್ ಕಂಪನಿಗಳ ಜಾಹೀರಾತುಗಳನ್ನು ನಿರ್ದೇಶಿಸಿದ್ದು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಎಂದರು. ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ ಅನುಭವ, ಜಾಗತಿಕ ಸಿನಿಮಾಗಳ ಅಧ್ಯಯನ ಹಾಗೂ ಮಲಯಾಳಂ ನಟ ನಿವಿನ್ ಪೌಲಿ ಅವರನ್ನು ಭೇಟಿಯಾದ ಕ್ಷಣ ತಮ್ಮ ಸಿನಿ ಪಯಣದ ಅಮೂಲ್ಯ ನೆನಪುಗಳಾಗಿವೆ ಎಂದು ಜೇಸನ್ ಸಂಜಯ್ ತಿಳಿಸಿದ್ದಾರೆ.



