ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಮಾಲತಿ ಹೊಳೆ ಭಾರಿ ಮಳೆಯಿಂದ ಉಕ್ಕಿ ಹರಿದ ಪರಿಣಾಮ, ಹೊನ್ನಾವರ ಮೂಲದ ಕುಟುಂಬವೊಂದು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ನೀರಿನ ರಭಸಕ್ಕೆ ಸೇತುವೆ ಮೇಲೆ ಕಾರು ಸಿಲುಕಿಕೊಂಡಿದ್ದು, ಸ್ಥಳೀಯರ ಸಮಯಪ್ರಜ್ಞೆಯಿಂದ ಕುಟುಂಬ ಸುರಕ್ಷಿತವಾಗಿ ಪಾರಾಗಿದೆ.
ಭಾರಿ ಮಳೆಯಿಂದ ಮಾಲತಿ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ನಾಬಳ ಸೇತುವೆ ಮೇಲೆ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ಮಾರ್ಗದಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಶೃಂಗೇರಿಗೆ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಸೇತುವೆ ಮೇಲೆ ನೀರು ತುಂಬಿ ಕಾರಿನೊಳಗೆ ನೀರು ನುಗ್ಗಿದೆ.
ಅಪಾಯ ಅರಿತ ಕುಟುಂಬಸ್ಥರು ಕಾರಿನ ಮೇಲೇರಿ ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರಾದ ಪ್ರವೀಣ್, ಮಂಜುನಾಥ್ ಸೇರಿದಂತೆ ಕೆಲವರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಕಾರಿಗೆ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಕ್ಕೆ ಎಳೆದು ತಂದಿದ್ದಾರೆ.
ಕಾರಿನಲ್ಲಿದ್ದ ಬಾಲಕನೊಬ್ಬನನ್ನು ಸ್ಥಳೀಯರು ಹೊತ್ತು ತಂದು ರಕ್ಷಿಸಿದ್ದು, ಸ್ಥಳೀಯರ ಸಾಹಸ ಹಾಗೂ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.



