ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ಗೆಳತಿ ಮಹೀಕಾ ಶರ್ಮಾ ಅವರೊಂದಿಗೆ ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಬ್ಬರೂ ಸಾಂಪ್ರದಾಯಿಕ ಬಿಳಿ ಉಡುಪಿನಲ್ಲಿ ದೇವರ ದರ್ಶನ ಪಡೆದು, ಬೆಳಗಿನ ಸುಪ್ರಭಾತ ಸೇವೆಯಲ್ಲೂ ಭಾಗವಹಿಸಿ ಶ್ರೀನಿವಾಸನ ಆಶೀರ್ವಾದ ಪಡೆದರು.
ಈ ವೇಳೆ ಹಾರ್ದಿಕ್ ಪಾಂಡ್ಯ ಮುಡಿ ಸಮರ್ಪಣೆ ಮಾಡಿರುವುದು ಭಕ್ತರು ಹಾಗೂ ಅಭಿಮಾನಿಗಳ ಗಮನ ಸೆಳೆಯಿತು. ಅವರ ಹೊಸ ಲುಕ್‌ನ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುಡಿ ಸಮರ್ಪಣೆಯ ಹಿಂದೆ ಯಾವುದೇ ಹರಕೆ ಇದೆಯೇ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ.
ಆದರೆ, ಈ ಕುರಿತು ಹಾರ್ದಿಕ್ ಪಾಂಡ್ಯ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ತಿರುಮಲದಲ್ಲಿ ಭಕ್ತರು ಹರಕೆಯ ರೂಪದಲ್ಲಿ ಕೂದಲು ಸಮರ್ಪಿಸುವ ಸಂಪ್ರದಾಯ ಇರುವ ಹಿನ್ನೆಲೆಯಲ್ಲಿ, ಅದರ ಭಾಗವಾಗಿಯೇ ಅವರು ಮುಡಿ ಕೊಟ್ಟಿರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದೇ ವೇಳೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಶೀಘ್ರದಲ್ಲೇ ಮತ್ತೆ ಕ್ರಿಕೆಟ್ ಮೈದಾನಕ್ಕಿಳಿಯುವ ನಿರೀಕ್ಷೆಯೂ ಹೆಚ್ಚಿದೆ. ಐಪಿಎಲ್ 2026ರ ಬಳಿಕ ಬೆನ್ನು ಹಾಗೂ ತೊಡೆಯ ಗಾಯದಿಂದ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಗಾಯದ ಕಾರಣ ಇಂಗ್ಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿ ಸೇರಿದಂತೆ ಜಿಂಬಾಬ್ವೆ ವಿರುದ್ಧದ ಸರಣಿಯನ್ನೂ ಅವರು ತಪ್ಪಿಸಿಕೊಂಡಿದ್ದರು.
ಇದೀಗ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ವರದಿಯಾಗಿದೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಪ್ರಮುಖ ಆಲ್‌ರೌಂಡರ್ ಆಗಿರುವ ಹಾರ್ದಿಕ್ ಪಾಂಡ್ಯ, ಬ್ಯಾಟಿಂಗ್, ಬೌಲಿಂಗ್ ಹಾಗೂ ನಾಯಕತ್ವದ ಮೂಲಕ ತಂಡಕ್ಕೆ ಪ್ರಮುಖ ಬಲವಾಗಿದ್ದಾರೆ. ಆಧ್ಯಾತ್ಮಿಕ ಭೇಟಿ ಬಳಿಕ ಅವರು ಹೊಸ ಉತ್ಸಾಹದೊಂದಿಗೆ ಭಾರತ ತಂಡಕ್ಕೆ ಮರಳಿ ಮತ್ತೆ ಮೈದಾನದಲ್ಲಿ ಮಿಂಚಲಿದ್ದಾರೆ ಎಂಬ ವಿಶ್ವಾಸವನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.



