ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಕುರ್ಕುರೆ ಪ್ಯಾಕೆಟ್ನಲ್ಲಿದ್ದ ಗಿಫ್ಟ್ ಬಾಲ್ ಅನ್ನು ಬಾಯಿಗೆ ಹಾಕಿ ನುಂಗಿದ ಪರಿಣಾಮ ಐದು ವರ್ಷದ ಬಾಲಕ ಉಸಿರುಗಟ್ಟಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೃತ ಬಾಲಕನನ್ನು ಮುಕುಂದ್ ಮಯೂರ್ (5) ಎಂದು ಗುರುತಿಸಲಾಗಿದೆ. ಆತ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಗೌರಮ್ಮ ಹಾಗೂ ಶಂಕರ್ ನಾಯಕ ಅವರ ಮೊಮ್ಮಗ ಹಾಗೂ ಸಂತೋಷ್–ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದ್ದ.
ಬಾಲಕ ಕುರ್ಕುರೆ ಪ್ಯಾಕೆಟ್ ಖರೀದಿಸಿದ್ದನು. ಪ್ಯಾಕೆಟ್ನೊಳಗೆ ಉಡುಗೊರೆಯಾಗಿ ನೀಡಲಾಗಿದ್ದ ಸಣ್ಣ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಅನ್ನು ಕುರ್ಕುರೆ ಎಂದು ಭಾವಿಸಿ ಬಾಯಿಗೆ ಹಾಕಿದ್ದಾನೆ. ಅಕಸ್ಮಿಕವಾಗಿ ಅದನ್ನು ನುಂಗಿದ ಪರಿಣಾಮ ಬಾಲ್ ಗಂಟಲಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿದ್ದು, ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.



