HomeGadag Newsಮೂಲಸೌಲಭ್ಯ ಕಲ್ಪಿಸದ ನಗರಸಭೆ ವಿರುದ್ಧ ಆಕ್ರೋಶ

ಮೂಲಸೌಲಭ್ಯ ಕಲ್ಪಿಸದ ನಗರಸಭೆ ವಿರುದ್ಧ ಆಕ್ರೋಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶಗಳ ಅಭಿವೃದ್ಧಿ ಹಾಗೂ ವಸತಿರಹಿತರ ಸಮಸ್ಯೆಗಳ ಪರಿಹಾರಕ್ಕೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದು, ಸ್ಲಂ ಜನರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿರುವ ಗದಗ ಜಿಲ್ಲಾ ಸ್ಲಂ ಸಮಿತಿ, ಶೀಘ್ರದಲ್ಲೇ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ನಗರಸಭೆ ಉದ್ಯಾನವನದಲ್ಲಿ ನಡೆದ ಸ್ಲಂ ನಿವಾಸಿಗಳು ಹಾಗೂ ವಸತಿರಹಿತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಇಮ್ತಿಯಾಜ್ ಆರ್. ಮಾನ್ವಿ, 2014ರಿಂದ ವಸತಿರಹಿತ ಕುಟುಂಬಗಳಿಗೆ ಮನೆ ಸೌಲಭ್ಯ ಕಲ್ಪಿಸುವಂತೆ ನಿರಂತರ ಹೋರಾಟ ನಡೆಸುತ್ತಿದ್ದೇವೆ. 348 ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರ ನೀಡಲಾಗಿದ್ದರೂ, ಮನೆ ಹಂಚಿಕೆ ವೇಳೆ ನೈಜ ಫಲಾನುಭವಿಗಳನ್ನು ಕೈಬಿಟ್ಟು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅನರ್ಹರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಇದಕ್ಕೆ ನಗರಸಭೆ ಪೌರಾಯುಕ್ತರು ಹಾಗೂ ಆಶ್ರಯ ಯೋಜನೆ ಸಿಬ್ಬಂದಿಯೇ ನೇರ ಹೊಣೆ ಎಂದು ಆರೋಪಿಸಿದರು.

ನಗರದ ಕೊಳಗೇರಿ ಪ್ರದೇಶಗಳನ್ನು ಅಧಿಕೃತವಾಗಿ ಘೋಷಿಸಲು ಅಗತ್ಯವಿರುವ ನಿರಾಕ್ಷೇಪಣಾ ಪತ್ರ ನೀಡುವಲ್ಲಿಯೂ ನಗರಸಭೆ ವಿಳಂಬ ನೀತಿ ಅನುಸರಿಸುತ್ತಿದೆ. ಅನೇಕ ಬಾರಿ ಮನವಿ ಸಲ್ಲಿಸಿದರೂ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಗರಸಭೆ ಬಜೆಟ್‌ನಲ್ಲಿ ಸ್ಲಂ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಒತ್ತಾಯಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಸ್ಲಂ ಪ್ರದೇಶಗಳ ಅನೇಕ ಮಹಿಳೆಯರಿಗೆ ಶೌಚಾಲಯ ಸೌಲಭ್ಯವಿಲ್ಲದ ಕಾರಣ ಇಂದಿಗೂ ಬಯಲು ಶೌಚವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಈ ಗಂಭೀರ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಆರೋಗ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಲಂ ನಿವಾಸಿಗಳು ಮತ್ತು ವಸತಿರಹಿತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ನಗರದ ಎಲ್ಲಾ ಸ್ಲಂ ನಿವಾಸಿಗಳು ಹಾಗೂ ವಸತಿರಹಿತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕು ಎಂದು ಇಮ್ತಿಯಾಜ್ ಮಾನ್ವಿ ಕರೆ ನೀಡಿದರು.

ಸಭೆಯಲ್ಲಿ ಸಂಘಟನೆಯ ಮುಖಂಡ ಎಂ.ಬಿ. ನದಾಫ್ (ವಕೀಲರು), ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಪುಷ್ಪಾ ಬಿಜಾಪೂರ, ಖಾಜಾಸಾಬ ಇಸ್ಮಾಯಿಲನವರ, ವಿಶಾಲಕ್ಷಿ ಹಿರೇಗೌಡ್ರ, ಲಕ್ಷ್ಮಿ ಮಳೆಕರ, ಮುನ್ನಾ ಅಗಡಿ, ನಜಮುನಿಸಾ ಮುರಗೋಡ, ಖಾಜಾಸಾಬ ಬಳ್ಳಾರಿ, ವೆಂಕಟೇಶ ಬಿಂಕದಕಟ್ಟಿ, ರವಿ ಗೋಸಾವಿ, ಮಕ್ತುಮಸಾಬ ಮುಲ್ಲಾನವರ, ಸಾಕ್ರುಬಾಯಿ ಗೋಸಾವಿ ಸೇರಿದಂತೆ ನಗರದ ವಿವಿಧ ಸ್ಲಂ ಪ್ರದೇಶಗಳ ಮುಖಂಡರು ಭಾಗವಹಿಸಿದ್ದರು.

“ಸ್ಲಂ ಜನರ ನ್ಯಾಯಸಮ್ಮತ ಬೇಡಿಕೆಗಳಿಗೆ ನಗರಸಭೆ ಸ್ಪಂದಿಸದಿದ್ದರೆ ಸಾವಿರಾರು ಸ್ಲಂ ನಿವಾಸಿಗಳೊಂದಿಗೆ ಬೃಹತ್ ಹೋರಾಟ ನಡೆಸಲಾಗುವುದು.”

– ಇಮ್ತಿಯಾಜ್ ಆರ್. ಮಾನ್ವಿ, ಅಧ್ಯಕ್ಷರು, ಗದಗ ಜಿಲ್ಲಾ ಸ್ಲಂ ಸಮಿತಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img