ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳುವ ವೇಳೆ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಿಕ್ಷಣ ಇಲಾಖೆ ಹೊಸ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಹೊಸ ಸುತ್ತೋಲೆಯ ಪ್ರಕಾರ, ಶೈಕ್ಷಣಿಕ ಪ್ರವಾಸದ ಅವಧಿಯಲ್ಲಿ ವಿದ್ಯಾರ್ಥಿಗಳು ಸೆಲ್ಫಿ, ಫೋಟೋ ಹಾಗೂ ಸಾಮಾಜಿಕ ಜಾಲತಾಣಗಳಿಗಾಗಿ ರೀಲ್ಸ್‌ಗಳನ್ನು ಚಿತ್ರೀಕರಿಸುವುದನ್ನು ನಿರ್ಬಂಧಿಸಲಾಗಿದೆ. ಪ್ರವಾಸಿ ತಾಣಗಳು, ನದಿಗಳು, ಜಲಪಾತಗಳು ಹಾಗೂ ಎತ್ತರದ ಬೆಟ್ಟ-ಗುಡ್ಡಗಳ ಬಳಿ ಮೊಬೈಲ್‌ನಲ್ಲಿ ಫೋಟೋ, ಸೆಲ್ಫಿ ಮತ್ತು ರೀಲ್ಸ್ ಮಾಡುವ ವೇಳೆ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸ ಆರಂಭಿಸುವ ಮುನ್ನವೇ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ನಿಯಮಗಳ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು. ಅಲ್ಲದೆ, ಪ್ರವಾಸದ ವೇಳೆ ವಿದ್ಯಾರ್ಥಿಗಳೊಂದಿಗೆ ತೆರಳುವ ಉಪನ್ಯಾಸಕರು ನಿಯಮಗಳ ಪಾಲನೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ತೀವ್ರ ನಿಗಾವಹಿಸಬೇಕು ಎಂದು ಇಲಾಖೆ ಸೂಚಿಸಿದೆ.
ಪೂರ್ವಾನುಮತಿ, ಪೋಷಕರ ಒಪ್ಪಿಗೆ ಕಡ್ಡಾಯ
ಯಾವುದೇ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳು ಶಿಕ್ಷಣ ಇಲಾಖೆಯಿಂದ ಕಡ್ಡಾಯ ಪೂರ್ವಾನುಮತಿ ಪಡೆಯದೇ ಶೈಕ್ಷಣಿಕ ಪ್ರವಾಸ ಆಯೋಜಿಸುವಂತಿಲ್ಲ. ಪ್ರವಾಸಕ್ಕೆ ತೆರಳುವ ಪ್ರತಿಯೊಬ್ಬ ವಿದ್ಯಾರ್ಥಿಯಿಂದ ಮುಚ್ಚಳಿಕೆ ಪತ್ರ ಹಾಗೂ ಪೋಷಕರ ಲಿಖಿತ ಸಮ್ಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ.
ಇದರ ಜೊತೆಗೆ, ಪ್ರವಾಸಕ್ಕೆ ತೆರಳುವ ಮಾರ್ಗ ಮತ್ತು ಭೇಟಿ ನೀಡಲಿರುವ ಸ್ಥಳಗಳ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ವ್ಯಾಪ್ತಿಯ ಸ್ಥಳೀಯ ಪೊಲೀಸ್ ಠಾಣೆಗೆ ಮುಂಚಿತವಾಗಿಯೇ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಖಾಯಂ ಅಧ್ಯಾಪಕರ ಉಪಸ್ಥಿತಿ ಕಡ್ಡಾಯ
ಅತಿಥಿ ಉಪನ್ಯಾಸಕರನ್ನು ಮಾತ್ರ ಅವಲಂಬಿಸಿ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ಕಳುಹಿಸುವಂತಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರವಾಸದ ತಂಡದಲ್ಲಿ ಕನಿಷ್ಠ ಒಬ್ಬ ಖಾಯಂ ಅಧ್ಯಾಪಕರು ಕಡ್ಡಾಯವಾಗಿ ಇರಬೇಕು.
ಪ್ರವಾಸಕ್ಕೆ ನಿಯೋಜಿಸುವ ಬೋಧಕ ಸಿಬ್ಬಂದಿಯ ಸಂಖ್ಯೆ ನಾಲ್ಕನ್ನು ಮೀರಬಾರದು. ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಕನಿಷ್ಠ ಇಬ್ಬರು ಮಹಿಳಾ ಅಧ್ಯಾಪಕಿಯರು ತಂಡದಲ್ಲಿರಬೇಕು ಎಂದು ಸೂಚಿಸಲಾಗಿದೆ.
ಅನುಮೋದಿತ ಸ್ಥಳಗಳಿಗೆ ಮಾತ್ರ ಭೇಟಿ
ಶೈಕ್ಷಣಿಕ ಪ್ರವಾಸದ ವೇಳೆ ಇಲಾಖೆಯಿಂದ ಅನುಮೋದಿಸಲಾದ ಸ್ಥಳಗಳನ್ನು ಹೊರತುಪಡಿಸಿ ಯಾವುದೇ ಅಪಾಯಕಾರಿ ಪ್ರದೇಶಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಮಾರ್ಗಸೂಚಿಗಳನ್ನು ಜಾರಿಗೆ ತಂದಿದ್ದು, ಪ್ರವಾಸ ಆಯೋಜಿಸುವ ಕಾಲೇಜುಗಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.



