HomeGadag Newsಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ನಿರ್ಧಾರಗಳನ್ನು ಕೈಬಿಡಿ: ಬಸವರಾಜ ಗುರಿಕಾರ

ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸುವ ನಿರ್ಧಾರಗಳನ್ನು ಕೈಬಿಡಿ: ಬಸವರಾಜ ಗುರಿಕಾರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಶಿಕ್ಷಣ ತಜ್ಞರು ಹಾಗೂ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸರ್ಕಾರ ಕೈಗೊಳ್ಳುತ್ತಿರುವ ಅವೈಜ್ಞಾನಿಕ ನಿರ್ಧಾರಗಳಿಂದ ಸರ್ಕಾರಿ ಶಾಲೆಗಳು ದಿನದಿಂದ ದಿನಕ್ಕೆ ದುರ್ಬಲವಾಗುತ್ತಿವೆ ಎಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಕಳವಳ ವ್ಯಕ್ತಪಡಿಸಿದರು.

ನಗರದ ಕನಕ ಭವನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಗದಗ ಜಿಲ್ಲಾ ಘಟಕ ಹಾಗೂ ಗದಗ ಗ್ರಾಮೀಣ ಶಿಕ್ಷಕರ ಸಂಘದ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಧನ್ಯತಾ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರ್ಕಾರ ಜಾರಿಗೊಳಿಸಿರುವ ಕ್ಯಾಂಪ್ಸ್‌ (CAMPUS) ಹಾಗೂ ವೆಬ್‌ಕಾಸ್ಟ್ ಹಾಜರಾತಿ ವ್ಯವಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಯಾವುದೇ ನೆರವಾಗುವುದಿಲ್ಲ ಎಂದು ಟೀಕಿಸಿದ ಅವರು, ಶಾಲೆಗಳಲ್ಲಿ ವಿಷಯವಾರು ಶಿಕ್ಷಕರು, ಮುಖ್ಯ ಶಿಕ್ಷಕರು, ಕ್ಲರ್ಕ್ ಹಾಗೂ ಅಗತ್ಯ ಸಿಬ್ಬಂದಿಯ ಕೊರತೆ ಇರುವ ಸಂದರ್ಭದಲ್ಲಿ ಶಿಕ್ಷಕರ ಮೇಲೆ ಹೆಚ್ಚುವರಿ ಆಡಳಿತಾತ್ಮಕ ಹೊರೆ ಹಾಕುವುದು ಸರಿಯಲ್ಲ ಎಂದರು.

“ಕ್ಯಾಂಪ್ಸ್‌ ವ್ಯವಸ್ಥೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಬದಲು ಆ ಹಣವನ್ನು ಸರ್ಕಾರಿ ಶಾಲೆಗಳಿಗೆ ನೀಡಿ ಕಂಪ್ಯೂಟರ್ ಆಪರೇಟರ್‌ಗಳನ್ನು ನೇಮಿಸಿದ್ದರೆ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತಿತ್ತು. ಈ ವ್ಯವಸ್ಥೆ ಕಲಿಕೆಗೆ ಪೂರಕವಾಗದಿದ್ದರೆ ಸರ್ಕಾರ ಕೂಡಲೇ ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.

ಸೇವಾನಿರತ ಶಿಕ್ಷಕರಿಗೆ ಟೀಚರ್ ಎಲಿಜಿಬಿಲಿಟಿ ಟೆಸ್ಟ್ (ಟಿಇಟಿ) ಕಡ್ಡಾಯಗೊಳಿಸಿರುವ ಎನ್‌ಸಿಟಿಇ ನಿಯಮವನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ರದ್ದುಪಡಿಸಬೇಕು. ಇಲ್ಲವಾದರೆ ದೇಶದ ಸುಮಾರು 30 ಲಕ್ಷ ಶಿಕ್ಷಕರ ಉದ್ಯೋಗ ಭದ್ರತೆಗೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ವಿ.ಎಂ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಅವರ ಪ್ರಯತ್ನದಿಂದ 1997ರಿಂದ ಇದ್ದ ಟಿಇಟಿ ಸಮಸ್ಯೆಗೆ ಕಾನೂನು ತಿದ್ದುಪಡಿ ಸಾಧ್ಯವಾಗಿ ಸುಮಾರು 10 ಸಾವಿರ ಶಿಕ್ಷಕರಿಗೆ ಬಡ್ತಿ ದೊರೆತಿದೆ ಎಂದು ಹೇಳಿದರು.

ಉಪನಿರ್ದೇಶಕ ಆರ್.ಎಸ್. ಬುರಡಿ ಅವರ ಅಧಿಕಾರಾವಧಿಯಲ್ಲಿ ಗದಗ ಜಿಲ್ಲೆಯಲ್ಲಿ ಸುಮಾರು 180 ಪ್ರಾಥಮಿಕ ಶಿಕ್ಷಕರಿಗೆ ಮುಖ್ಯ ಶಿಕ್ಷಕರಾಗಿ, 48 ಮಂದಿಗೆ ಹಾಗೂ 15 ದೈಹಿಕ ಶಿಕ್ಷಕರಿಗೆ ಬಡ್ತಿ ನೀಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ದೈಹಿಕ ಶಿಕ್ಷಕರಿಗೆ ಬಡ್ತಿ ನೀಡಿದ ಜಿಲ್ಲೆ ಗದಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

ರಾಜ್ಯ ಮಹಿಳಾ ಘಟಕದ ಸಹ ಕಾರ್ಯದರ್ಶಿ ಪ್ರಮೀಳಾ ಕಾಮನಹಳ್ಳಿ ಮಾತನಾಡಿ, ಕಳೆದ ಹತ್ತು ತಿಂಗಳಲ್ಲಿ ರಾಜ್ಯ ಸಂಘವು ಶಿಕ್ಷಕರ ಪರವಾಗಿ 27 ಮಹತ್ವದ ಆದೇಶಗಳನ್ನು ಹೊರಡಿಸಿದ್ದು, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿರುವುದು ಸಂಘದ ಮಹತ್ವದ ಸಾಧನೆ ಎಂದರು.

ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ, ಡಿಡಿಪಿಐ ಆರ್.ಎಸ್. ಬುರಡಿ, ಬಿಇಒ ವಿ.ವಿ. ನಡುವಿನಮನಿ, ಡಯಟ್ ಪ್ರಾಚಾರ್ಯ ಕೆ.ಡಿ. ಬಡಿಗೇರ, ಅಕ್ಷರ ದಾಸೋಹ ಅಧಿಕಾರಿ ಶಂಕರ ಹಡಗಲಿ, ತಾಲೂಕು ಅಧ್ಯಕ್ಷ ಶಿವಯೋಗಿ ಬಂಡಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಭಾನ್ವಿತ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ, ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಲಾಯಿತು.

“ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೈಗೊಳ್ಳುವ ಅವೈಜ್ಞಾನಿಕ ನಿರ್ಧಾರಗಳಿಂದ ಸರ್ಕಾರಿ ಶಾಲೆಗಳು ದುರ್ಬಲವಾಗುತ್ತಿವೆ. ಕಲಿಕೆಗೆ ಪೂರಕವಾಗದ ಕ್ಯಾಂಪ್ಸ್‌ ವ್ಯವಸ್ಥೆಯನ್ನು ಸರ್ಕಾರ ಹಿಂಪಡೆಯಬೇಕು.”

– ಬಸವರಾಜ ಗುರಿಕಾರ, ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಅಧ್ಯಕ್ಷರು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img