ಚೆನ್ನೈ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕ ಸಭೆಯಲ್ಲಿ ನಟಿ ತ್ರಿಷಾ ಕುರಿತು ನೀಡಿದ ಹೇಳಿಕೆ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್ಸಿಡಬ್ಲ್ಯು) ದೂರು ಸಲ್ಲಿಸಿ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಕಾವೇರಿ ನೀರಿನ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ, ಜನಸಮೂಹದಿಂದ “ತ್ರಿಷಾ… ತ್ರಿಷಾ…” ಎಂಬ ಘೋಷಣೆಗಳು ಕೇಳಿಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಮಹಿಳೆಯರನ್ನು ಅವಮಾನಿಸುವ ಹಾಗೂ ದ್ವಂದ್ವಾರ್ಥ ಹೊಂದಿದೆ ಎಂದು ಟಿವಿಕೆ ಆರೋಪಿಸಿದೆ.
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ, ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯರ ಕುರಿತು ಇಂತಹ ಹೇಳಿಕೆ ನೀಡುವುದು ಅಸ್ವೀಕಾರಾರ್ಹ. ಇದು ಮಹಿಳೆಯರನ್ನು ವಸ್ತುವಿನಂತೆ ಕಾಣುವ ಮನೋಭಾವಕ್ಕೆ ಉತ್ತೇಜನ ನೀಡುತ್ತದೆ ಎಂದು ಟಿವಿಕೆ ತಿಳಿಸಿದೆ.
ಉದಯನಿಧಿ ಸ್ಟಾಲಿನ್ ಅವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚನೆ ಮಾಡಬೇಕು. ಮಹಿಳೆಯರ ಘನತೆಗೆ ಧಕ್ಕೆ ತಂದಿರುವ ಆರೋಪದಡಿ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯಿಸಿದೆ. ಅಲ್ಲದೆ, ಈ ವಿಚಾರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಟಿವಿಕೆ ಘೋಷಿಸಿದೆ.
ಈ ಹೇಳಿಕೆಯನ್ನು ಬಿಜೆಪಿ ಕೂಡ ತೀವ್ರವಾಗಿ ಖಂಡಿಸಿದ್ದು, ಮಹಿಳೆಯರ ಬಗ್ಗೆ ಇಂತಹ ಭಾಷೆ ಬಳಸುವುದು ಯಾವುದೇ ರಾಜಕೀಯ ನಾಯಕರಿಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದೆ. ಉದಯನಿಧಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.



