ಕ್ರೀಡಾಲೋಕಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದ್ದು, ಪ್ರಸಿದ್ಧ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಪ್ರಚಾರ ಸಂಸ್ಥೆ ಯುಎಫ್‌ಸಿಯ ಪ್ರತಿಭಾವಂತ ಫೈಟರ್ ಬ್ರೆಜಿಲ್‌ನ ಅಲ್ಲಾನ್ ನಾಸಿಮೆಂಟೊ ನಿಧನರಾಗಿದ್ದಾರೆ.
ನಿದ್ರೆಯಲ್ಲಿದ್ದಾಗ ಸಂಭವಿಸಿದ ಹೃದಯಾಘಾತದಿಂದ ಅಲ್ಲಾನ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ ತಮ್ಮ ಮನೆಯಲ್ಲಿ ಅವರು ಅಸ್ವಾಭಾವಿಕ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣ ವೈದ್ಯಕೀಯ ತಂಡ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಲು ಪ್ರಯತ್ನಿಸಿತ್ತು. ಆದರೆ ಯಾವುದೇ ಪ್ರಯೋಜನವಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಲ್ಲಾನ್ ನಾಸಿಮೆಂಟೊ ಅವರ ನಿಧನವನ್ನು ಯುಎಫ್‌ಸಿ ಅಧಿಕೃತವಾಗಿ ದೃಢಪಡಿಸಿದ್ದು, ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಸಂತಾಪ ಸೂಚಿಸಿದೆ. ಅಲ್ಲಾನ್ ನಾಸಿಮೆಂಟೊ ಅವರು 2011ರಲ್ಲಿ ವೃತ್ತಿಪರ ಎಂಎಂಎ ವೃತ್ತಿಜೀವನ ಆರಂಭಿಸಿದ್ದರು. ಬಳಿಕ 2021ರಲ್ಲಿ ಯುಎಫ್‌ಸಿಗೆ ಸೇರ್ಪಡೆಯಾಗಿದ್ದರು.
ತಮ್ಮ ಒಟ್ಟಾರೆ ಎಂಎಂಎ ವೃತ್ತಿಜೀವನದಲ್ಲಿ ಅವರು 22 ಗೆಲುವು ಮತ್ತು 7 ಸೋಲುಗಳ ದಾಖಲೆ ಹೊಂದಿದ್ದರು. ಯುಎಫ್‌ಸಿಯಲ್ಲಿ ಅವರು 4-2 ದಾಖಲೆ ನಿರ್ಮಿಸಿದ್ದರು. ಈ ವರ್ಷದ ಜೂನ್‌ನಲ್ಲಿ ಮಿಚ್ ರಾಪೋಸೊ ವಿರುದ್ಧ ನಡೆದ ಪಂದ್ಯವೇ ಅವರ ವೃತ್ತಿಜೀವನದ ಕೊನೆಯ ಹೋರಾಟವಾಗಿತ್ತು.
ಅಲ್ಲಾನ್ ನಾಸಿಮೆಂಟೊ ಕೇವಲ ಒಬ್ಬ ಫೈಟರ್ ಆಗಿರದೆ, ತಮ್ಮ ಶಿಸ್ತು, ಸರಳತೆ ಮತ್ತು ವಿನಯಶೀಲತೆಗೆ ಹೆಸರಾಗಿದ್ದರು. ಶೂಟ್ ಬಾಕ್ಸೆ ತಂಡವು ಅವರನ್ನು ಒಬ್ಬ ಶ್ರೇಷ್ಠ ಯೋಧ ಹಾಗೂ ಅದ್ಭುತ ವ್ಯಕ್ತಿ ಎಂದು ಸ್ಮರಿಸಿದೆ. ಅಲ್ಪ ವಯಸ್ಸಿನಲ್ಲೇ ಪ್ರತಿಭಾವಂತ ಫೈಟರ್ ಒಬ್ಬರನ್ನು ಕಳೆದುಕೊಂಡಿರುವುದು ಎಂಎಂಎ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.



