ಬೆಂಗಳೂರು: ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ತಾವು ಯಾವುದೇ ಬಂಡಾಯ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ತಾವು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. “ಕಾಂಗ್ರೆಸ್ ನನಗೆ ದೇವಾಲಯ ಇದ್ದಂತೆ. ಕಾಂಗ್ರೆಸ್ ನಮ್ಮ ಗರ್ಭಗುಡಿ. ಪಕ್ಷದ ನಾಯಕರು ನೀಡುವ ಸೂಚನೆಯನ್ನು ನಾನು ಪಾಲಿಸುತ್ತೇನೆ” ಎಂದು ಹೇಳಿದ್ದಾರೆ.
“ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ಬಿ.ಕೆ. ಹರಿಪ್ರಸಾದ್ ಅವರು ನಮ್ಮ ನಾಯಕರು. ಸಾಮಾನ್ಯ ವ್ಯಕ್ತಿಯಾಗಿದ್ದ ನನಗೆ ಪಕ್ಷ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ. ಹೀಗಾಗಿ ಮಧ್ಯಾಹ್ನ ನಡೆಯುವ ಸಭೆಗೆ ನಾನು ಹೋಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಚಿವ ಸ್ಥಾನ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಅವರು, “ಮಂತ್ರಿಯಾಗಬೇಕು ಎಂಬ ಆಸೆ ಇರುವುದು ಸಹಜ. ಆದರೆ ಈಗಲೇ ಸಚಿವ ಸ್ಥಾನ ಬೇಕು ಎಂಬ ಹಠ ಇಲ್ಲ. ಹಿರಿಯರಿಗೆ ಅವಕಾಶ ಸಿಕ್ಕಿದೆ. ನನಗೆ ಇನ್ನೂ ವಯಸ್ಸಿದೆ, ಅವಕಾಶಕ್ಕಾಗಿ ಕಾಯುತ್ತೇನೆ” ಎಂದರು.
“ನಾನು ಇನ್ನೂ 30 ವರ್ಷ ಕಾಯಲು ಸಿದ್ಧನಿದ್ದೇನೆ. ಸಭೆ ನಡೆಸುತ್ತಿರುವವರಿಂದ ನನಗೆ ಯಾವುದೇ ಕರೆ ಬಂದಿಲ್ಲ. ನಾನು ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಆದ್ದರಿಂದ ಆ ಸಭೆಯಲ್ಲಿ ಭಾಗವಹಿಸುವುದಿಲ್ಲ” ಎಂದು ಪ್ರದೀಪ್ ಈಶ್ವರ್ ಹೇಳಿದರು.
ಇದೇ ವೇಳೆ 2028ರ ವಿಧಾನಸಭೆ ಚುನಾವಣೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, “ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂಬ ನಂಬಿಕೆ ಇದೆ” ಎಂದು ತಿಳಿಸಿದರು.



