ನವದೆಹಲಿ: ಫುಕೆಟ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾದ AI2379 ವಿಮಾನ ಮಧ್ಯಾಕಾಶದಲ್ಲಿ ತೀವ್ರ ಟರ್ಬುಲೆನ್ಸ್ಗೆ ಸಿಲುಕಿ ಏಕಾಏಕಿ ಸುಮಾರು 300 ಅಡಿ ಕುಸಿದ ಘಟನೆ ನಡೆದಿದೆ. ಈ ವೇಳೆ ಇಬ್ಬರು ಸಿಬ್ಬಂದಿ ಸೇರಿದಂತೆ ಒಟ್ಟು 12 ಮಂದಿ ಗಾಯಗೊಂಡಿದ್ದು, ವಿಮಾನಕ್ಕೂ ಸಣ್ಣ ಪ್ರಮಾಣದ ಹಾನಿಯಾಗಿದೆ.
ಮಂಗಳವಾರ ಬೆಳಿಗ್ಗೆ 8:25ಕ್ಕೆ ಫುಕೆಟ್ನಿಂದ ಹೊರಟಿದ್ದ ವಿಮಾನ, ಮಧ್ಯಾಹ್ನ 11:50ಕ್ಕೆ ನವದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು. ಹಾರಾಟದ ವೇಳೆ ಏಕಾಏಕಿ ಸಂಭವಿಸಿದ ತೀವ್ರ ಪ್ರಕ್ಷುಬ್ಧತೆಗೆ ಕ್ಲಿಯರ್ ಏರ್ ಟರ್ಬುಲೆನ್ಸ್ (CAT) ಅಥವಾ ಅಪ್ಡ್ರಾಫ್ಟ್-ಡೌನ್ಡ್ರಾಫ್ಟ್ ಕಾರಣವಾಗಿರಬಹುದು ಎಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ.
ಘಟನೆಯಲ್ಲಿ ಕೆಲ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ವಿಮಾನ ಇಳಿದ ತಕ್ಷಣ ಗಾಯಾಳುಗಳನ್ನು ವಿಮಾನ ನಿಲ್ದಾಣದ ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಹಾಗೂ ತಪಾಸಣೆ ನಡೆಸಲಾಯಿತು.
ಏರ್ ಇಂಡಿಯಾ ಪ್ರಕಟಣೆಯಲ್ಲಿ, “ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಗಾಯಗೊಂಡವರಿಗೆ ಅಗತ್ಯವಿರುವ ಎಲ್ಲ ವೈದ್ಯಕೀಯ ನೆರವು ಒದಗಿಸಲಾಗಿದೆ. ಘಟನೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ” ಎಂದು ತಿಳಿಸಿದೆ.
ವಿಮಾನದಲ್ಲಿದ್ದ 134 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಹೊರಬಂದಿದ್ದು, ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.



