ಚಿಕ್ಕಬಳ್ಳಾಪುರ: ಸಚಿವ ಸಂಪುಟ ವಿಸ್ತರಣೆಯಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದ ಬೆನ್ನಲ್ಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯದ ಕಹಳೆ ಮೊಳಗಿದೆ. ಬೆಂಬಲಿಗರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಬಂದ್ಗೆ ಕರೆ ನೀಡಿದ್ದು, ಕಾಂಗ್ರೆಸ್ನ ವಿವಿಧ ಘಟಕಗಳ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಾಗೇಪಲ್ಲಿ, ಗುಡಿಬಂಡೆ ಮತ್ತು ಚೇಳೂರು ತಾಲೂಕುಗಳಲ್ಲಿ ಬುಧವಾರ ಸಂಪೂರ್ಣ ಬಂದ್ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.
ಈ ವೇಳೆ ಮಾತನಾಡಿದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನರೇಂದ್ರ, “ಬಿಜೆಪಿಯ ಆಪರೇಷನ್ ಕಮಲದ ಆಮಿಷವನ್ನೂ ತಿರಸ್ಕರಿಸಿ ಕಾಂಗ್ರೆಸ್ಗೆ ನಿಷ್ಠೆಯಿಂದ ಉಳಿದ ಸುಬ್ಬಾರೆಡ್ಡಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಸಚಿವ ಸ್ಥಾನ ನೀಡದೇ ಪಕ್ಷ ಅವಮಾನ ಮಾಡಿದೆ” ಎಂದು ಕಿಡಿಕಾರಿದರು.
“ಈ ನಿರ್ಧಾರದಿಂದ ಕಾರ್ಯಕರ್ತರ ಭಾವನೆಗೆ ಧಕ್ಕೆಯಾಗಿದೆ. ಅದರ ವಿರುದ್ಧ ಪ್ರತಿಭಟನೆಯ ಭಾಗವಾಗಿ ಕಾಂಗ್ರೆಸ್ನ ವಿವಿಧ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸುತ್ತೇವೆ. ಕ್ಷೇತ್ರ ಬಂದ್ ಮೂಲಕ ನಮ್ಮ ಆಕ್ರೋಶ ವ್ಯಕ್ತಪಡಿಸುತ್ತೇವೆ” ಎಂದು ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ.



