ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಜಯಣ್ಣ-ಭೋಗೇಂದ್ರ ಅವರ ಸಿನಿ ಪಯಣದ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಪ್ರೇರಣೆ ಅಡಗಿದೆ. ಈ ಅಚ್ಚರಿಯ ಸಂಗತಿಯನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ದರ್ಶನ್ ನಟನೆಯ ‘ಸ್ನೇಹನಾ ಪ್ರೀತಿನಾ’ ಹಾಗೂ ‘ಭೂಪತಿ’ ಸಿನಿಮಾಗಳ ವಿದೇಶಿ ಚಿತ್ರೀಕರಣದ ವೇಳೆ ಆಸ್ಟ್ರೇಲಿಯಾದಲ್ಲಿ ವಿಜಯಲಕ್ಷ್ಮಿ ದರ್ಶನ್ ಅವರು, ‘ಇತರರ ಸಿನಿಮಾಗಳನ್ನು ವಿತರಣೆ ಮಾಡುವ ಬದಲು ನೀವೇ ನಿರ್ಮಾಪಕರಾಗಿ. ಹಣ ಹೂಡಿ ಸಿನಿಮಾ ಮಾಡಿ. ಕಾಲ್‌ಶೀಟ್ ನಮ್ಮದು’ ಎಂದು ಸಲಹೆ ನೀಡಿದ್ದರು ಎಂದು ಜಯಣ್ಣ ಹೇಳಿದ್ದಾರೆ.
ಆ ವೇಳೆ ನಿರ್ಮಾಪಕರಾಗುವ ಉದ್ದೇಶವೇ ಇರಲಿಲ್ಲ. ಸಿನಿಮಾ ನಿರ್ಮಾಣದಲ್ಲಿ ದೊಡ್ಡ ರಿಸ್ಕ್ ಇರುವುದರಿಂದ ವಿತರಣೆ ವ್ಯವಹಾರದಲ್ಲೇ ಮುಂದುವರಿಯಲು ನಿರ್ಧರಿಸಿದ್ದೆವು. ಆದರೆ ವಿಜಯಲಕ್ಷ್ಮಿ ಅವರ ವಿಶ್ವಾಸ ಮತ್ತು ಪ್ರೋತ್ಸಾಹವೇ ನಮ್ಮ ನಿರ್ಧಾರವನ್ನು ಬದಲಿಸಿತು. ಅದರ ಫಲವಾಗಿ ‘ಅರ್ಜುನ್’ ಚಿತ್ರದ ಮೂಲಕ ನಿರ್ಮಾಪಕರಾಗಿ ಹೊಸ ಅಧ್ಯಾಯ ಆರಂಭವಾಯಿತು ಎಂದು ಅವರು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಆ ಸಹಾಯವನ್ನು ಎಂದಿಗೂ ಮರೆಯದ ಜಯಣ್ಣ-ಭೋಗೇಂದ್ರ, ‘ಅರ್ಜುನ್’ ಚಿತ್ರದ ಟೈಟಲ್‌ನಲ್ಲಿ ‘ವಿಜಯಲಕ್ಷ್ಮಿ ದರ್ಶನ್ ಪ್ರೆಸೆಂಟ್ಸ್’ ಎಂದು ವಿಶೇಷ ಕ್ರೆಡಿಟ್ ನೀಡಿ ಕೃತಜ್ಞತೆ ಸಲ್ಲಿಸಿದ್ದರು. ಆ ದಿನದಿಂದ ಇಂದಿನವರೆಗೆ ನಿರ್ಮಾಣ ಕ್ಷೇತ್ರದಲ್ಲಿ ಯಶಸ್ವಿಯಾಗಿ ಸಾಗುತ್ತಿರುವುದಾಗಿ ಭೋಗೇಂದ್ರ ಹೇಳಿದ್ದಾರೆ.



