ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಗದಗ ವಿಭಾಗೀಯ ಕಚೇರಿಯ ಸಹಾಯಕ ಸಂಚಾರ ವ್ಯವಸ್ಥಾಪಕರಾಗಿ ವರ್ಗಾವಣೆಗೊಂಡಿರುವ ಸವಿತಾ ಆದಿ ಅವರನ್ನು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳ ಮಾತನಾಡಿ, ಸವಿತಾ ಆದಿ ಅವರು ಲಕ್ಷ್ಮೇಶ್ವರ ಘಟಕದಲ್ಲಿ ಆಡಳಿತಾತ್ಮಕ ದಕ್ಷತೆ, ಕಾರ್ಯನಿಷ್ಠೆ ಹಾಗೂ ಸಾರ್ವಜನಿಕ ಸ್ನೇಹಿ ಸೇವೆಯ ಮೂಲಕ ಉತ್ತಮ ಹೆಸರು ಗಳಿಸಿದ್ದಾರೆ ಎಂದು ಶ್ಲಾಘಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಿರುವುದು ಶ್ಲಾಘನೀಯವಾಗಿದೆ. ಅವರ ಸೇವಾ ಮನೋಭಾವ ಇತರ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಲಕ್ಷ್ಮೇಶ್ವರ ಕೆಎಸ್ಆರ್ಟಿಸಿ ಘಟಕದ ನೂತನ ವ್ಯವಸ್ಥಾಪಕರಾಗಿ ಅಧಿಕಾರ ಸ್ವೀಕರಿಸಿರುವ ಪವಿತ್ರಾ ಪಿ. ಅವರನ್ನು ಸಮಿತಿ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಸಾರ್ವಜನಿಕ ಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಿ ಶಕ್ತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮಿಸುವಂತೆ ಶುಭ ಹಾರೈಸಲಾಯಿತು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರು, ತಾಲೂಕು ಪಂಚಾಯಿತಿ ಅಧಿಕಾರಿಗಳು, ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



