ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಭದ್ರತಾ ಪಡೆಗಳಲ್ಲಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಸಬ್ ಇನ್‌ಸ್ಪೆಕ್ಟರ್ ರಾಚಪ್ಪ ಮಸಗಿ ಅವರಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾ ಘಟಕದ ವತಿಯಿಂದ ಭವ್ಯ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ರೋಣ ತಾಲೂಕಿನ ನಾಗರಾಳ ಮೂಲದ ಹಾಗೂ ನರಸಾಪುರ ನಿವಾಸಿಯಾಗಿರುವ ರಾಚಪ್ಪ ಮಸಗಿ ಅವರು ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ವಾಪಸ್ಸಾದ ಹಿನ್ನೆಲೆಯಲ್ಲಿ, ಗದಗ ರೈಲ್ವೆ ನಿಲ್ದಾಣದಲ್ಲಿ ಮಾಜಿ ಸೈನಿಕರ ಸಂಘದ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ ನೇತೃತ್ವದಲ್ಲಿ ಹೂವಿನ ಸುರಿಮಳೆಗೈದು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಬಳಿಕ ರೈಲ್ವೆ ನಿಲ್ದಾಣದಿಂದ ಹೆಲ್ತ್ ಕ್ಯಾಂಪ್, ಬೆಟಗೇರಿ ಮಾರ್ಗವಾಗಿ ನರಸಾಪುರದವರೆಗೆ ದೇಶಭಕ್ತಿ ಗೀತೆಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ನಡೆದ ಸಮಾರಂಭದಲ್ಲಿ ರಾಚಪ್ಪ ಮಸಗಿ ಅವರ ಕುಟುಂಬದವರು ಮಾಜಿ ಸೈನಿಕರು ಹಾಗೂ ವೀರನಾರಿಯರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ದೇಶದ ಗಡಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶವನ್ನು ಕಾಪಾಡುವ ಸೈನಿಕರ ಸೇವೆ ಅತ್ಯಂತ ಶ್ರೇಷ್ಠವಾಗಿದೆ. ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಭಾರತೀಯ ಸೈನಿಕರ ತ್ಯಾಗವೇ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಮಾಜಿ ಸೈನಿಕರು, ವೀರನಾರಿಯರು, ಅರೆಸೇನಾ ಪಡೆಗಳ ಯೋಧರು ಹಾಗೂ ನಾಗರಾಳ ಮತ್ತು ನರಸಾಪುರ ಗ್ರಾಮದ ಗಣ್ಯರು, ಸಾರ್ವಜನಿಕರು ಮತ್ತು ದೇಶಪ್ರೇಮಿಗಳು ಉಪಸ್ಥಿತರಿದ್ದರು.



