HomeGadag Newsಜೀತ ಪದ್ಧತಿ-ಮಾನವ ಕಳ್ಳಸಾಗಾಣಿಕೆಗೆ ಕಡಿವಾಣ ಅಗತ್ಯ: ಸಿ.ಎಸ್. ಶಿವನಗೌಡ್ರ

ಜೀತ ಪದ್ಧತಿ-ಮಾನವ ಕಳ್ಳಸಾಗಾಣಿಕೆಗೆ ಕಡಿವಾಣ ಅಗತ್ಯ: ಸಿ.ಎಸ್. ಶಿವನಗೌಡ್ರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: “ಶಾಲೆಯಿಂದ ಹೊರಗುಳಿಯುವ ಮಕ್ಕಳು ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿಯ ಮೊದಲ ಬಲಿಗಳಾಗುತ್ತಿದ್ದಾರೆ. ಪ್ರತಿಯೊಬ್ಬ ಮಗುವಿಗೂ ಶಿಕ್ಷಣದ ಹಕ್ಕು ತಲುಪಿದರೆ ಈ ಸಾಮಾಜಿಕ ಪಿಡುಗನ್ನು ಆರಂಭದಲ್ಲೇ ತಡೆಗಟ್ಟಬಹುದು” ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಉದಯೋನ್ಮುಖ ಸ್ವಯಂಸೇವಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿ ಕಾರ್ಮಿಕ ವಿರೋಧಿ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರೊಂದಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಪದ್ಧತಿ ಸಮಾಜದ ಘೋರ ಪಿಡುಗುಗಳಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ. ಕೆಲಸಕ್ಕೆ ತಕ್ಕ ವೇತನ ನೀಡದೆ ದುಡಿಸಿಕೊಳ್ಳುವುದೂ ಜೀತ ಪದ್ಧತಿಯ ಒಂದು ರೂಪವಾಗಿದ್ದು, ಇಂತಹ ಕೃತ್ಯಗಳ ವಿರುದ್ಧ ಸಮಾಜ ಜಾಗೃತವಾಗಬೇಕು ಎಂದು ಹೇಳಿದರು.

ಜೀತ ಪದ್ಧತಿಯಿಂದ ಮುಕ್ತಗೊಳಿಸುವುದಷ್ಟೇ ಸಾಕಾಗುವುದಿಲ್ಲ. ಸಂತ್ರಸ್ತರಿಗೆ ಬಿಡುಗಡೆ ಪತ್ರ, ಆರ್ಥಿಕ ನೆರವು, ಕೌಶಲ್ಯ ತರಬೇತಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಪುನರ್ವಸತಿ ಕಲ್ಪಿಸಿದಾಗ ಮಾತ್ರ ಅವರಿಗೆ ನಿಜವಾದ ನ್ಯಾಯ ದೊರೆಯುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಜೀತ ಪದ್ಧತಿ ನಡೆಸುವವರಷ್ಟೇ ಅಲ್ಲ, ಅದನ್ನು ಕಂಡೂ ಮೌನವಾಗಿರುವವರೂ ತಪ್ಪಿತಸ್ಥರಾಗುತ್ತಾರೆ. ಇಂತಹ ಪ್ರಕರಣಗಳು ಕಂಡುಬಂದ ತಕ್ಷಣ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದರು.

ಉದಯೋನ್ಮುಖ ಸ್ವಯಂಸೇವಾ ಸಂಸ್ಥೆಯ ಅಧ್ಯಕ್ಷ ವೈ. ಪಕ್ಕಣ್ಣ ಬೆಲೇರಿ ಮಾತನಾಡಿ, ಜೀತ ಪದ್ಧತಿಯಿಂದ ಮುಕ್ತರಾದ ಸಂತ್ರಸ್ತರ ಅನುಭವಗಳನ್ನೇ ಆಧಾರವಾಗಿಟ್ಟುಕೊಂಡು ರಾಜ್ಯಾದ್ಯಂತ ಜಾಗೃತಿ ಮೂಡಿಸಲಾಗುತ್ತಿದೆ. ಯಾರೂ ಅಜ್ಞಾನದಿಂದ ಊರು ಬಿಟ್ಟು ಹೋಗಿ ಇಂತಹ ಸಂಕಷ್ಟಗಳಿಗೆ ಸಿಲುಕಬಾರದು ಎಂಬ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಜಾಗೃತಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಜಿ-ಸ್ಕ್ವಾಡ್ ತಂಡದಿಂದ ಕಿರು ನಾಟಕ ಪ್ರದರ್ಶನ ನಡೆಯಿತು. ಬಳಿಕ ಜಾಗೃತಿ ವಾಹನವು ಲಕ್ಕುಂಡಿ, ನಾಗರಾಳ, ಹಳಿಕೇರಿ, ಗದಗ ನಗರ ಸೇರಿದಂತೆ ವಿವಿಧೆಡೆ ಸಂಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧಾ ಮಣ್ಣೂರ, ಜಿಲ್ಲಾ ಆರೋಗ್ಯಾಧಿಕಾರಿ ಎಸ್.ಎಸ್. ನೀಲಗುಂದ, ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಸಂದೀಪ್ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

“ಶಾಲೆ ಬಿಟ್ಟ ಪ್ರತಿಯೊಂದು ಮಗುವನ್ನು ಮರಳಿ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿ ನಿರ್ಮೂಲನೆಯ ಮೊದಲ ಹೆಜ್ಜೆಯಾಗಿದೆ.”
– ಸಿ.ಎಸ್. ಶಿವನಗೌಡ್ರ, ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img