HomeKarnataka Newsನಿರ್ದೋಷಿ ಎಂದಾದ ಬಳಿಕ ಡಿಜಿಟಲ್ ದಾಖಲೆಗಳಲ್ಲೂ ಕಳಂಕ ಉಳಿಯಬಾರದು: ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ನಿರ್ದೋಷಿ ಎಂದಾದ ಬಳಿಕ ಡಿಜಿಟಲ್ ದಾಖಲೆಗಳಲ್ಲೂ ಕಳಂಕ ಉಳಿಯಬಾರದು: ಮಹತ್ವದ ತೀರ್ಪು ನೀಡಿದ ಹೈಕೋರ್ಟ್

For Dai;y Updates Join Our whatsapp Group

ಬೆಂಗಳೂರು: ಕಾನೂನು ಹೋರಾಟದಲ್ಲಿ ವ್ಯಕ್ತಿಯೊಬ್ಬರು ನಿರ್ದೋಷಿ ಎಂದು ನ್ಯಾಯಾಲಯದಿಂದ ಬಿಡುಗಡೆಯಾದ ಬಳಿಕವೂ, ಅವರ ಹೆಸರನ್ನು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಆನ್‌ಲೈನ್ ದಾಖಲೆಗಳಲ್ಲಿ ಶಾಶ್ವತವಾಗಿ ಉಳಿಯಲು ಬಿಡುವುದು ನ್ಯಾಯದ ಮೂಲ ಉದ್ದೇಶವನ್ನೇ ಸೋಲಿಸಿದಂತಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇರಾನ್ ಮೂಲದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಸಂವಿಧಾನದ ಪರಿಚ್ಛೇದ 21ರಡಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯವು ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ನಂತರವೂ, ಡಿಜಿಟಲ್ ವೇದಿಕೆಗಳಲ್ಲಿ ಹಳೆಯ ಆರೋಪಗಳ ದಾಖಲೆಗಳು ಮುಂದುವರಿಯುವುದರಿಂದ ಅವರ ಜೀವನ, ಉದ್ಯೋಗ ಮತ್ತು ಸಾಮಾಜಿಕ ಗೌರವಕ್ಕೆ ಧಕ್ಕೆಯಾಗಬಾರದು ಎಂದು ಪೀಠ ತಿಳಿಸಿದೆ.

ಈ ಹಿನ್ನೆಲೆಯಲ್ಲಿ, ಕ್ರಿಮಿನಲ್ ಪ್ರಕರಣದಿಂದ ಮುಕ್ತಳಾಗಿ ಏಳು ವರ್ಷಗಳಾದ ಬಳಿಕವೂ ಆನ್‌ಲೈನ್‌ನಲ್ಲಿ ಆಕೆಯ ಹೆಸರು ಪ್ರಕರಣದೊಂದಿಗೆ ಕಾಣಿಸಿಕೊಳ್ಳುತ್ತಿರುವುದನ್ನು ಗಮನಿಸಿದ ಹೈಕೋರ್ಟ್, ಹೈಕೋರ್ಟ್ ಹಾಗೂ ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್‌ಗಳು, ಹೆಬ್ಬಾಳ ಪೊಲೀಸ್ ಠಾಣೆ, ಗೂಗಲ್ ಇಂಡಿಯಾ ಹಾಗೂ ಇಂಡಿಯನ್ ಕಾನೂನ್ ಪೋರ್ಟಲ್‌ಗೆ ಸಂಬಂಧಿತ ದಾಖಲೆಗಳಿಂದ ಆಕೆಯ ಹೆಸರನ್ನು ತೆಗೆದುಹಾಕುವಂತೆ ನಿರ್ದೇಶನ ನೀಡಿದೆ.

ಸಂವಿಧಾನದ ಪರಿಚ್ಛೇದ 21 ಕೇವಲ ದೈಹಿಕ ಸ್ವಾತಂತ್ರ್ಯವನ್ನಷ್ಟೇ ನೀಡುವುದಿಲ್ಲ. ಅನಗತ್ಯ ಕಳಂಕ, ನಿರಂತರ ಅನುಮಾನ ಹಾಗೂ ಅವಮಾನದಿಂದ ಮುಕ್ತವಾಗಿ ಘನತೆಯಿಂದ ಬದುಕುವ ಹಕ್ಕನ್ನೂ ಅದು ಖಾತರಿಪಡಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಮರ್ಥ ನ್ಯಾಯಾಲಯವೊಂದು ವ್ಯಕ್ತಿಯನ್ನು ನಿರ್ದೋಷಿ ಎಂದು ಘೋಷಿಸಿದ ಬಳಿಕ, ಡಿಜಿಟಲ್ ಜಗತ್ತಿನಲ್ಲೂ ಆ ಕಾನೂನುಬದ್ಧ ವಿಮೋಚನೆ ಪ್ರತಿಫಲಿಸಬೇಕು ಎಂಬುದು ನ್ಯಾಯಾಂಗ ಮಾಹಿತಿಯನ್ನು ಪ್ರಕಟಿಸುವ ಪ್ರತಿಯೊಂದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:

2014ರಲ್ಲಿ ದಾಖಲಾಗಿದ್ದ ಅಕ್ರಮ ಮಾನವ ಸಾಗಣೆ ತಡೆ ಕಾಯ್ದೆ, ವಿದೇಶಿಯರ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ (ಐಟಿ ಕಾಯ್ದೆ) ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳಡಿ ಇರಾನ್ ಮೂಲದ ಮಹಿಳೆಯನ್ನು ಮೂರನೇ ಆರೋಪಿಯಾಗಿ ಸೇರಿಸಲಾಗಿತ್ತು. 2015ರಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, 2019ರ ಮಾರ್ಚ್ 28ರಂದು ವಿಚಾರಣಾ ನ್ಯಾಯಾಲಯ ಆಕೆಯನ್ನು ಎಲ್ಲಾ ಆರೋಪಗಳಿಂದ ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.

ಬಳಿಕ ಮಹಿಳೆ ವಿಶ್ವಸಂಸ್ಥೆಯ ಮೂಲಕ ನಿರಾಶ್ರಿತರ ಸ್ಥಾನಮಾನ ಪಡೆದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಹೊಸ ಜೀವನ ಆರಂಭಿಸಿದ್ದರು. ಆದರೆ ಇಂಟರ್‌ನೆಟ್‌ನಲ್ಲಿ ಹೆಸರು ಹುಡುಕಿದಾಗ ಹಳೆಯ ಕ್ರಿಮಿನಲ್ ಪ್ರಕರಣದ ವಿವರಗಳು ಇನ್ನೂ ಕಾಣಿಸಿಕೊಳ್ಳುತ್ತಿದ್ದ ಕಾರಣ, ಉದ್ಯೋಗದಾತರು ಹಾಗೂ ಇತರರಿಂದ ನಡೆಯುವ ಹಿನ್ನೆಲೆ ಪರಿಶೀಲನೆಯಲ್ಲಿ ಸಮಸ್ಯೆ ಎದುರಾಗುತ್ತಿತ್ತು. ಇದರಿಂದ ವೃತ್ತಿಜೀವನಕ್ಕೆ ತೊಡಕಾಗುತ್ತಿದ್ದ ಹಿನ್ನೆಲೆಯಲ್ಲಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img