ರಾಯಚೂರು: ಕಲಿಯುಗ ಕಾಮಧೇನು ಎಂದೇ ಖ್ಯಾತಿ ಪಡೆದಿರುವ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ 21 ದಿನಗಳಲ್ಲಿ ಭಕ್ತರು ಒಟ್ಟು ₹3,75,91,531 ಕಾಣಿಕೆ ಸಲ್ಲಿಸಿದ್ದಾರೆ.
ಜುಲೈ ಹಾಗೂ ಆಗಸ್ಟ್ ತಿಂಗಳ ಅವಧಿಯಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಉದಾರವಾಗಿ ಕಾಣಿಕೆ ಸಲ್ಲಿಸಿದ್ದಾರೆ. ಇದರ ಪರಿಣಾಮವಾಗಿ ಕೇವಲ 21 ದಿನಗಳಲ್ಲೇ ಕೋಟ್ಯಂತರ ರೂಪಾಯಿ ಸಂಗ್ರಹವಾಗಿದೆ.
ಮಠದ ಆಡಳಿತ ಮಂಡಳಿ ನೀಡಿರುವ ಮಾಹಿತಿ ಪ್ರಕಾರ, ಒಟ್ಟು ಸಂಗ್ರಹವಾದ ಕಾಣಿಕೆಯಲ್ಲಿ ₹3,65,16,531 ಕರೆನ್ಸಿ ನೋಟುಗಳ ರೂಪದಲ್ಲಿದ್ದು, ₹10,75,000 ನಾಣ್ಯಗಳ ರೂಪದಲ್ಲಿ ಸಂಗ್ರಹವಾಗಿದೆ. ಇದರ ಜೊತೆಗೆ ಭಕ್ತರು 49 ಗ್ರಾಂ ಚಿನ್ನ ಹಾಗೂ 865 ಗ್ರಾಂ ಬೆಳ್ಳಿಯನ್ನು ಕೂಡ ಕಾಣಿಕೆಯಾಗಿ ಅರ್ಪಿಸಿದ್ದಾರೆ.
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿಯ ಸದಸ್ಯರು ಹಾಗೂ ಕರಸೇವಕರು ಭಾಗವಹಿಸಿದ್ದರು. ಮುಜರಾಯಿ ಇಲಾಖೆ ಅಧಿಕಾರಿಗಳು ಮತ್ತು ಶ್ರೀಮಠದ ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಸಂಪೂರ್ಣ ಪ್ರಕ್ರಿಯೆ ನಡೆಸಲಾಯಿತು.
ಮಂತ್ರಾಲಯಕ್ಕೆ ಪ್ರತೀ ತಿಂಗಳೂ ಸಾವಿರಾರು ಭಕ್ತರು ಆಗಮಿಸುತ್ತಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೇಲಿನ ಅಪಾರ ಭಕ್ತಿಯಿಂದ ಹುಂಡಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ಹರಿದು ಬರುತ್ತಿದೆ.



