ವಿಜಯಸಾಕ್ಷಿ ಸುದ್ದಿ, ಗದಗ: ಕಡುಬಡತನದಿಂದಲೇ ಶಿಕ್ಷಣ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಡಾ. ಬಿ.ಎಫ್. ದಂಡಿನ ಅವರ ಜೀವನ ಇಂದಿನ ಯುವಜನತೆಗೆ ಆದರ್ಶವಾಗಿದೆ ಎಂದು ಆರ್ಎಸ್ಎಸ್ನ ಅಖಿಲ ಭಾರತೀಯ ವ್ಯವಸ್ಥ ಪ್ರಮುಖ ಮಂಗೇಶ್ ಬೆಂಡೆಜಿ ಹೇಳಿದರು.
ನಗರದ ಗಾಣಿಗ ಭವನದಲ್ಲಿ ಕನಕದಾಸ ಶಿಕ್ಷಣ ಸಮಿತಿ ಹಾಗೂ ಡಾ. ಬಿ.ಎಫ್. ದಂಡಿನ ವಿದ್ಯಾರ್ಥಿ ಬಳಗದ ಆಶ್ರಯದಲ್ಲಿ ನಡೆದ ಡಾ. ಬಿ.ಎಫ್. ದಂಡಿನ ಹಾಗೂ ಶಕುಂತಲಾಬಾಯಿ ದಂಡಿನ ಅವರ ಸಾರ್ವಜನಿಕ ನುಡಿನಮನ ಸಭೆ ಮತ್ತು ಸ್ಮಾರಕ ಭೂಮಿಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಗಿನೆಲೆ ಶ್ರೀ ರೇವಣಸಿದ್ದೇಶ್ವರ ಸಂಸ್ಥಾನ ಮಠದ ಶ್ರೀಗಳು ಮಾತನಾಡಿ, ದಂಡಿನ ಅವರು ಶಿಕ್ಷಣವನ್ನು ಸಾಮಾಜಿಕ ಚಳವಳಿಯನ್ನಾಗಿ ರೂಪಿಸಿದ ಅಪರೂಪದ ಮಹನೀಯರು ಎಂದು ಬಣ್ಣಿಸಿದರು. ನರಗುಂದ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಡಿ.ಆರ್. ಪಾಟೀಲ, ಡಾ. ತೇಜಸ್ವಿ ಕಟ್ಟಿಮನಿ, ಮಲ್ಲಿಕಾರ್ಜುನ ಸಿದ್ದಣ್ಣನವರ, ದೊಡ್ಡನಗೌಡ ಪಾಟೀಲ ಸೇರಿದಂತೆ ಹಲವು ಗಣ್ಯರು ದಂಡಿನ ದಂಪತಿಗಳ ಶಿಕ್ಷಣ ಸೇವೆ ಮತ್ತು ಸಮಾಜಮುಖಿ ಕಾರ್ಯವನ್ನು ಸ್ಮರಿಸಿ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಶಿಕ್ಷಣ ತಜ್ಞರು, ಕನಕದಾಸ ಶಿಕ್ಷಣ ಸಮಿತಿಯ ಪದಾಧಿಕಾರಿಗಳು, ನೂರಾರು ಹಳೆಯ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



