ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಗುವಿನ ಆರೋಗ್ಯಕರ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಂತ ಅವಶ್ಯಕವಾಗಿದ್ದು, ಜನನದ ಮೊದಲ ಒಂದು ಗಂಟೆಯೊಳಗೆ ಸ್ತನ್ಯಪಾನ ಆರಂಭಿಸಿ, ಕನಿಷ್ಠ ಆರು ತಿಂಗಳವರೆಗೆ ಕಡ್ಡಾಯವಾಗಿ ತಾಯಿ ಎದೆಹಾಲನ್ನೇ ನೀಡಬೇಕು ಎಂದು ಉಪಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಎಫ್. ಹನಕನಹಳ್ಳಿ ಹೇಳಿದರು.
ತಾಲೂಕಿನ ಶಿಗ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಯಿ ಎದೆಹಾಲಿನಷ್ಟು ಪೌಷ್ಟಿಕಾಂಶಯುಕ್ತ ಆಹಾರ ಮತ್ತೊಂದಿಲ್ಲ. ಇದು ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ತಾಯಿ–ಮಗುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ತಾಯಿ ಎದೆಹಾಲು ಪರಿಶುದ್ಧವಾಗಿದ್ದು, ಸುಲಭವಾಗಿ ಜೀರ್ಣವಾಗುವುದರಿಂದ ಅದನ್ನು ಅಮೃತಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ಆರೋಗ್ಯ ಶಿಕ್ಷಣಾಧಿಕಾರಿ ಜಿ.ಬಿ. ಬಣಗಾರ ಮಾತನಾಡಿ, ಜನನದ ಮೊದಲ ಗಂಟೆಯಲ್ಲಿಯೇ ಎದೆಹಾಲುಣಿಸುವುದರಿಂದ ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ತಾಯಿಯ ಮೊದಲ ಹಾಲು ಶಿಶುವಿನ ಆರೋಗ್ಯಕರ ಬದುಕಿಗೆ ಭದ್ರ ಬುನಾದಿಯಾಗಿದ್ದು, ಶಿಶು ಹಾಗೂ ತಾಯಿ ಮರಣ ಪ್ರಮಾಣ ತಗ್ಗಿಸಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ತಾಯಿಯೂ ಮಗುವಿಗೆ ಕನಿಷ್ಠ ಆರು ತಿಂಗಳವರೆಗೆ ಕೇವಲ ತಾಯಿ ಎದೆಹಾಲನ್ನೇ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸುಧಾ ಪಪ್ತಿ, ಅಂಗನವಾಡಿ ಕಾರ್ಯಕರ್ತೆ ಸೌಮ್ಯಾ ಕಲ್ಯಾಣಮಠ, ಆಶಾ ಕಾರ್ಯಕರ್ತೆ ಶಶಿಕಲಾ ಚಿಂದಿ, ಆರೋಗ್ಯ ಸಿಬ್ಬಂದಿ, ಗರ್ಭಿಣಿಯರು ಹಾಗೂ ಬಾಣಂತಿಯರು ಉಪಸ್ಥಿತರಿದ್ದರು.



