ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮರ್ ಫಾರೂಕ್ ಎಂ.ಆರ್. ಎಂಬಾತನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎನ್‌ಐಎ ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕೇರಳದ ಕೊಚ್ಚಿಯಲ್ಲಿ ಉಮರ್ ಫಾರೂಕ್‌ನನ್ನು ವಶಕ್ಕೆ ಪಡೆಯಲಾಗಿದೆ. ಈ ಬಂಧನದೊಂದಿಗೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಹತ್ಯೆ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಉಮರ್ ಫಾರೂಕ್ ವಿರುದ್ಧ ಇಂಟರ್‌ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ (RCN) ಹಾಗೂ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಯಾಗಿತ್ತು. ಈತನ ಬಂಧನಕ್ಕೆ ನೆರವಾಗುವ ಮಾಹಿತಿಯನ್ನು ನೀಡಿದವರಿಗೆ ಎನ್‌ಐಎ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ತನಿಖೆಯ ಪ್ರಕಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ಸುಳ್ಯ ಕಚೇರಿಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆಯ ಸಂಚು ಸಭೆಯಲ್ಲಿ ಉಮರ್ ಫಾರೂಕ್ ಇತರ ಆರೋಪಿಗಳೊಂದಿಗೆ ಸಕ್ರಿಯವಾಗಿ ಭಾಗವಹಿಸಿದ್ದ ಎನ್ನಲಾಗಿದೆ.
ಹತ್ಯೆಗೂ ಮುನ್ನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ನೆಟ್ಟಾರು ಅವರ ಚಲನವಲನಗಳ ಮೇಲೆ ನಿಗಾ ಇಡಲು ಹಾಗೂ ದಾಳಿ ನಡೆಸುವ ಸ್ಥಳವನ್ನು ಗುರುತಿಸಲು ಸಹ-ಆರೋಪಿಯೊಬ್ಬನಿಗೆ ತನ್ನ ಬೈಕ್‌ನ್ನು ಉಮರ್ ಫಾರೂಕ್ ನೀಡಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಇದರ ಜೊತೆಗೆ, ಈ ಪ್ರಕರಣದ ಸಂರಕ್ಷಿತ ಸಾಕ್ಷಿದಾರನ (Protected Witness) ಮೇಲೆ ನಡೆದ ಕೊಲೆ ಯತ್ನದ ಸಂಚಿನಲ್ಲೂ ಉಮರ್ ಫಾರೂಕ್ ಭಾಗಿಯಾಗಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.



