ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬರ ಪರಿಸ್ಥಿತಿ ಪರಿಶೀಲನೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆ ಭಾಗಕ್ಕೆ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿದ್ದರು. ಈ ವೇಳೆ ಅಜ್ಜಂಪುರದ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.
ಸಚಿವರ ವಾಹನದ ಮುಂಭಾಗದಲ್ಲಿ ಸಾಗುತ್ತಿದ್ದ ಪೊಲೀಸ್ ಜೀಪ್ ತಿರುವಿನ ಬಳಿ ಬ್ರೇಕ್ ಹಾಕುವ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಜೀಪ್ ನೇರವಾಗಿ ಅಮೃತ ಮಹಲ್ ತಳಿ ಸಂವರ್ಧನ ಕೇಂದ್ರದ ಪ್ರವೇಶ ದ್ವಾರದ ಗೇಟ್‌ಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಆದರೆ ಪೊಲೀಸ್ ಜೀಪ್‌ನ ಮುಂಭಾಗಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.



