ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರ ದಾಂಪತ್ಯ ವಿವಾದಕ್ಕೆ ಮಹತ್ವದ ತಿರುವು ಸಿಕ್ಕಿದೆ. ಅವರ ಪತ್ನಿ ಸಂಗೀತ, ಚೆಂಗಲ್ಪಟ್ಟು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ. ಇದರಿಂದ ಹಲವು ತಿಂಗಳುಗಳಿಂದ ಸುದ್ದಿಯಾಗಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಿದೆ.
ಫೆಬ್ರವರಿಯಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ದಾಂಪತ್ಯ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದ್ದ ಸಂಗೀತ, ಜೀವನಾಂಶ ಮತ್ತು ದಂಪತಿಯ ಜಂಟಿ ನಿವಾಸದಲ್ಲಿ ವಾಸಿಸಲು ಅನುಮತಿ ಕೋರಿದ್ದರು. ಆದರೆ ವಿಚಾರಣೆ ಪದೇಪದೆ ಮುಂದೂಡಿಕೆಯಾಗುತ್ತಲೇ ಬಂದಿತ್ತು.
ಪ್ರಕರಣದ ಯಾವುದೇ ವಿಚಾರಣೆಯಲ್ಲೂ ವಿಜಯ್ ಹಾಗೂ ಸಂಗೀತ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಅವರ ಪರ ವಕೀಲರು ಮಾತ್ರ ಹಾಜರಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುತ್ತಿದ್ದರು. ಆಗಸ್ಟ್ 7ರಂದು ನಿಗದಿಯಾಗಿದ್ದ ವಿಚಾರಣೆಗೆ ಮುನ್ನವೇ ಸಂಗೀತ ಅರ್ಜಿ ಹಿಂಪಡೆದಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆಯ ಅಗತ್ಯವೇ ಉಳಿದಿಲ್ಲ.
ವಿಚ್ಛೇದನ ಅರ್ಜಿ ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ವಿಜಯ್–ಸಂಗೀತ ದಾಂಪತ್ಯ ವಿವಾದದ ಕಾನೂನು ಅಧ್ಯಾಯ ಸದ್ಯಕ್ಕೆ ಅಂತ್ಯಗೊಂಡಿದ್ದು, ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ಹಾಗೂ ಚಿತ್ರರಂಗದಲ್ಲೂ ಸಾಕಷ್ಟು ಗಮನ ಸೆಳೆದಿದೆ.



