ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕ್ರೀಡಾಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಆತ್ಮವಿಶ್ವಾಸ, ಶಿಸ್ತು ಮತ್ತು ಗುರಿ ಸಾಧಿಸುವ ಛಲ ಬೆಳೆಯುತ್ತದೆ ಎಂದು ಚಿಕ್ಕಹಂದಿಗೋಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನಗುರು ಎಸ್.ಬಿ. ಅಂಗಡಿ ಹೇಳಿದರು.
ಮುಳಗುಂದ ಸಮೀಪದ ಶ್ಯಾಗೋಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಿಕ್ಕಹಂದಿಗೋಳ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿಯೇ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ನಾಯಕತ್ವ ಗುಣ, ಶ್ರದ್ಧೆ, ಸ್ಪರ್ಧಾತ್ಮಕ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿ ಬೆಳೆಯುತ್ತದೆ ಎಂದು ತಿಳಿಸಿದರು.
ಕ್ರೀಡಾಕೂಟದಲ್ಲಿ ಬಾಲಕರ ಹಾಗೂ ಬಾಲಕಿಯರ ಖೋ-ಖೋ ಮತ್ತು ವಾಲಿಬಾಲ್ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ಬಾಲಕಿಯರ ತ್ರೋಬಾಲ್ ವಿಭಾಗದಲ್ಲಿ ಪ್ರಥಮ ಸ್ಥಾನ, ವೀರಾಗ್ರಹಿಣಿ ಪ್ರಶಸ್ತಿ ಹಾಗೂ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್. ಕುರ್ತಕೋಟಿ, ಶಿಕ್ಷಕರಾದ ಜೆ.ಎಚ್. ಹುಚ್ಚಣ್ಣವರ, ವಿ.ಎಸ್. ಓದುಸುಮಠ, ಬಿ.ಬಿ. ಹುವಿನಹಳ್ಳಿ, ಎಂ.ಎನ್. ನಿಮ್ಮನಾಯ್ಕರ, ಜಯಶ್ರೀ, ಲಕ್ಷ್ಮಿ, ರಾಜೇಶ್ವರಿ, ಚಿನ್ನೂರ ಹಾಗೂ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
“ಪಠ್ಯದಷ್ಟೇ ಕ್ರೀಡೆಯೂ ಮುಖ್ಯ. ಕ್ರೀಡೆ ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಛಲ ಮತ್ತು ದೈಹಿಕ-ಮಾನಸಿಕ ಸದೃಢತೆಯನ್ನು ಬೆಳೆಸುತ್ತದೆ.”
— ಎಸ್.ಬಿ. ಅಂಗಡಿ, ಪ್ರಧಾನಗುರು



