ಹಗರಿಬೊಮ್ಮನಹಳ್ಳಿ: ಕೌಟುಂಬಿಕ ಕಲಹದ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತರಲಾಗಿದ್ದ ಕಟ್ಟಡ ಕಾರ್ಮಿಕ ಸಿ. ಖಲೀಲುಲ್ಲಾ (38) ಆಗಸ್ಟ್ 1ರ ಮಧ್ಯರಾತ್ರಿ ಠಾಣೆಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಆರಂಭವಾಗಿದೆ.
ಪ್ರಕರಣದ ತನಿಖೆಗಾಗಿ ಸಿಐಡಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಶನಿವಾರ ಹಗರಿಬೊಮ್ಮನಹಳ್ಳಿಗೆ ಆಗಮಿಸಿ ಪೊಲೀಸ್ ಠಾಣೆಗೆ ಭೇಟಿ ನೀಡಿತು. ಠಾಣೆಯಲ್ಲಿನ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ತಂಡ, ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಕಲೆಹಾಕಿತು.
ಇದೇ ವೇಳೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೂ ಸ್ಥಳದಲ್ಲಿದ್ದು, ತನಿಖಾ ತಂಡಕ್ಕೆ ಅಗತ್ಯ ಮಾಹಿತಿಯನ್ನು ಒದಗಿಸಿದ್ದಾರೆ. ಸಿಐಡಿ ಅಧಿಕಾರಿಗಳ ತಂಡ ಪ್ರಕರಣದ ವಿವಿಧ ಆಯಾಮಗಳ ಕುರಿತು ಮಾಹಿತಿ ಸಂಗ್ರಹಿಸಿ ತನಿಖೆ ಮುಂದುವರಿಸಿದೆ.
ಇಬ್ಬರು ಪೊಲೀಸರ ಅಮಾನತು:
ಖಲೀಲುಲ್ಲಾ ಅವರ ಪತ್ನಿ ಸಾಹಿಜಾನ್ ಅವರು ಆಗಸ್ಟ್ 2ರಂದು ನೀಡಿದ ದೂರಿನ ಆಧಾರದ ಮೇಲೆ ಹೆಡ್ ಕಾನ್ ಸ್ಟೇಬಲ್ ರಾಘವೇಂದ್ರ ಹಾಗೂ ಕಾನ್ ಸ್ಟೇಬಲ್ ವೆಂಕಟೇಶ್ ವಿರುದ್ಧ ಹಲ್ಲೆ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಕರಣದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾನ್ನವಿ ಆದೇಶ ಹೊರಡಿಸಿದ್ದಾರೆ. ಸದ್ಯ ಇಬ್ಬರು ಆರೋಪಿಗಳು ಹೂವಿನಹಡಗಲಿಯ ಉಪ ಬಂದಿಖಾನೆಯಲ್ಲಿ ಇದ್ದಾರೆ.
ಲಾಕಪ್‌ನಲ್ಲಿ ನಡೆದ ಸಾವು ಪ್ರಕರಣಕ್ಕೆ ಸಿಐಡಿ ತನಿಖೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ತನಿಖೆ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

