HomeBengaluru Newsಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕ್ಷಣಗಣನೆ; ಎರಡು ರೈಲು ಸೆಟ್‌ಗಳು ಸಿದ್ಧ,...

ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ಕ್ಷಣಗಣನೆ; ಎರಡು ರೈಲು ಸೆಟ್‌ಗಳು ಸಿದ್ಧ, ಶೀಘ್ರದಲ್ಲೇ ಟ್ರಯಲ್ ರನ್

For Dai;y Updates Join Our whatsapp Group

ಬೆಂಗಳೂರು: ಬೆಂಗಳೂರು-ಮುಂಬೈ ನಡುವೆ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಆರಂಭಕ್ಕೆ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ನೈಋತ್ಯ ರೈಲ್ವೆ ಎರಡು 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳನ್ನು ಸ್ವೀಕರಿಸಿ ಅಧಿಕೃತವಾಗಿ ನಿಯೋಜನೆ ಮಾಡಿದೆ. ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರ ನಡೆಸಿ, ಬಳಿಕ ರೈಲಿನ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲೇ ಬಿಇಎಂಎಲ್‌ (BEML) ನಿರ್ಮಿಸಿರುವ ಈ ಎರಡು ರೈಲು ಸೆಟ್‌ಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ನೇತೃತ್ವದ ಯೋಜನೆಯಡಿ ತಯಾರಿಸಲಾಗಿದೆ. ವಿವಿಧ ಹಂತಗಳ ಪರೀಕ್ಷೆ ಮತ್ತು ಪರಿಶೀಲನೆ ಪೂರ್ಣಗೊಂಡ ಬಳಿಕ ರೈಲುಗಳನ್ನು ನಿಯೋಜನೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಭಾಗದ ಡಿವಿಷನಲ್ ರೈಲ್ವೆ ಮ್ಯಾನೇಜರ್ ಆಶುತೋಷ್ ಕುಮಾರ್ ಸಿಂಗ್ ಅವರು ರೈಲು ಸೆಟ್‌ಗಳು ಕಮಿಷನ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ರೈಲು ಸೇವೆ ಆರಂಭಕ್ಕೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ರಾತ್ರಿ ಸಂಚಾರ, ಸುಮಾರು 16 ಗಂಟೆ ಪ್ರಯಾಣ

ವಂದೇ ಭಾರತ್ ಸ್ಲೀಪರ್ ರೈಲು ರಾತ್ರಿ ಬೆಂಗಳೂರಿನಿಂದ ಹಾಗೂ ಮುಂಬೈನಿಂದ ಸಂಚರಿಸುವ ನಿರೀಕ್ಷೆಯಿದೆ. ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಸುಮಾರು 16 ಗಂಟೆಗಳಾಗುವ ಸಾಧ್ಯತೆ ಇದೆ. ವಿಮಾನ ಪ್ರಯಾಣಕ್ಕೆ ಹೋಲಿಸಿದರೆ ಕಡಿಮೆ ದರದಲ್ಲಿ ಪ್ರಯಾಣಿಸಲು ಅವಕಾಶ ದೊರೆಯುವ ನಿರೀಕ್ಷೆ ಇರುವುದರಿಂದ ಈ ರೈಲು ಸೇವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ರೈಲನ್ನು KSR ಬೆಂಗಳೂರು-ಮುಂಬೈ CSMT ಮಾರ್ಗದಲ್ಲಿ ಆರಂಭಿಸುವ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯುತ್ತಿದೆ. ಇದೇ ವೇಳೆ, SMVT ಬೆಂಗಳೂರು ನಿಲ್ದಾಣದಿಂದ ಸೇವೆ ಆರಂಭಿಸುವ ಸಾಧ್ಯತೆಯನ್ನೂ ರೈಲ್ವೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಎರಡೂ ಆಯ್ಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

16 ಬೋಗಿಗಳಲ್ಲಿ ಮೂರು ವರ್ಗದ ಸೌಲಭ್ಯ

ಹೊಸ ವಂದೇ ಭಾರತ್ ಸ್ಲೀಪರ್ ರೈಲಿನಲ್ಲಿ ಒಟ್ಟು 16 ಬೋಗಿಗಳು ಇರಲಿವೆ. ಈ ಪೈಕಿ 11 ತ್ರೀ-ಟಯರ್ ಎಸಿ (3AC), ನಾಲ್ಕು 2-ಟಯರ್ ಎಸಿ (2AC) ಹಾಗೂ ಒಂದು ಫಸ್ಟ್ ಕ್ಲಾಸ್ ಎಸಿ (1AC) ಕೋಚ್ ಇರಲಿದೆ.

3AC ಟಿಕೆಟ್ ದರವು ಊಟ ಸೇರಿದಂತೆ ಸುಮಾರು 3,000 ರೂಪಾಯಿ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಅಂತಿಮ ದರವನ್ನು ರೈಲ್ವೆ ಇಲಾಖೆ ಅಧಿಕೃತವಾಗಿ ಪ್ರಕಟಿಸಬೇಕಿದೆ. ಪ್ರಾಯೋಗಿಕ ಸಂಚಾರದ ಬಳಿಕ ರೈಲಿನ ವೇಗ, ಪ್ರಯಾಣದ ಅವಧಿ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳ ಅಂತಿಮ ಪರೀಕ್ಷೆ ನಡೆಯಲಿದೆ.

ಕಲ್ಯಾಣ ಕರ್ನಾಟಕ ಭಾಗಕ್ಕೂ ಸಂಪರ್ಕ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಕಲ್ಯಾಣ ಕರ್ನಾಟಕ ಮಾರ್ಗವಾಗಿ ಸಂಚರಿಸುವ ನಿರೀಕ್ಷೆಯಿದೆ. ಈ ಮಾರ್ಗವು ರಾಯಚೂರು, ಯಾದಗಿರಿ ಹಾಗೂ ಕಲಬುರಗಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲಿದೆ.

ಬೆಂಗಳೂರು-ಮುಂಬೈ ನಡುವಿನ ಈ ಮಾರ್ಗ ಸುಮಾರು 1,137 ಕಿಲೋಮೀಟರ್ ಉದ್ದವಿದ್ದು, ಸಂಪೂರ್ಣ ವಿದ್ಯುದ್ದೀಕರಣಗೊಂಡಿದೆ. ಡಬ್ಲಿಂಗ್ ಕಾಮಗಾರಿಯೂ ಪೂರ್ಣಗೊಂಡಿದೆ. ಮಾರ್ಗದ ಹಲವು ಭಾಗಗಳಲ್ಲಿ ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ರೈಲು ಸಂಚರಿಸಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

24 ಗಂಟೆಯ ಪ್ರಯಾಣದ ಬದಲು 16 ಗಂಟೆ?

ಪ್ರಸ್ತುತ ಬೆಂಗಳೂರು-ಮುಂಬೈ ನಡುವೆ ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ SMVT ಬೆಂಗಳೂರು-ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳು ಸಂಚರಿಸುತ್ತಿವೆ. ಈ ರೈಲುಗಳಲ್ಲಿ ಪ್ರಯಾಣದ ಅವಧಿ ಸುಮಾರು 24 ಗಂಟೆಗಳಾಗುತ್ತದೆ.

ಹೊಸ ವಂದೇ ಭಾರತ್ ಸ್ಲೀಪರ್ ಸೇವೆ ಆರಂಭವಾದರೆ ಬೆಂಗಳೂರು-ಮುಂಬೈ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ಸುಮಾರು 16 ಗಂಟೆಗಳಲ್ಲಿ ಪ್ರಯಾಣ ಪೂರ್ಣಗೊಳಿಸುವ ನಿರೀಕ್ಷೆ ಇರುವುದರಿಂದ ಈ ಸೇವೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಬಹುದು.

ಹುಬ್ಬಳ್ಳಿ ಮಾರ್ಗದ ಬೇಡಿಕೆಗೆ ಏನಾಯ್ತು?

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ಹುಬ್ಬಳ್ಳಿ ಮಾರ್ಗವಾಗಿ ಓಡಿಸಬೇಕು ಎಂಬ ಬೇಡಿಕೆಯನ್ನು ಜನಪ್ರತಿನಿಧಿಗಳು ಹಾಗೂ ರೈಲ್ವೆ ಹೋರಾಟಗಾರರು ಈ ಹಿಂದೆ ಮುಂದಿಟ್ಟಿದ್ದರು. ಆದರೆ ಆ ಮಾರ್ಗದ ಉದ್ದ, ಕೆಲವು ಭಾಗಗಳಲ್ಲಿ ಸಿಂಗಲ್ ಟ್ರ್ಯಾಕ್ ಇರುವಿಕೆ ಹಾಗೂ ವೇಗದ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಆಯ್ಕೆಯನ್ನು ಪರಿಗಣಿಸಲಾಗಿಲ್ಲ ಎಂದು ತಿಳಿದುಬಂದಿದೆ.

ಸದ್ಯ ರೈಲು ಸೆಟ್‌ಗಳು ಕಮಿಷನ್ ಆಗಿರುವ ಹಿನ್ನೆಲೆಯಲ್ಲಿ ಪ್ರಾಯೋಗಿಕ ಸಂಚಾರದತ್ತ ರೈಲ್ವೆ ಇಲಾಖೆ ಗಮನಹರಿಸಿದೆ. ಟ್ರಯಲ್ ರನ್ ಪೂರ್ಣಗೊಂಡ ಬಳಿಕ ಅಂತಿಮ ಮಾರ್ಗ, ವೇಳಾಪಟ್ಟಿ, ನಿಲ್ದಾಣಗಳು ಹಾಗೂ ಟಿಕೆಟ್ ದರದ ಕುರಿತು ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img