ಹಾವೇರಿ: ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹಾವೇರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 18 ವರ್ಷದ ಬಾವರಸಿಂಗ್ ರಜಪೂತ್ ಸ್ಥಳದಲ್ಲೇ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಖಾಸಗಿ ಬಸ್ ವೇಗವಾಗಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಚಾಲಕನಿಗೆ ನಿದ್ರೆಯ ಮಂಪರು ಬಂದಿದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ತಕ್ಷಣ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ತೀವ್ರತೆಯಿಂದ ಬಸ್ನಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದರು ಎಂದು ತಿಳಿದುಬಂದಿದೆ.
ಮಾಹಿತಿ ತಿಳಿದ ಹಾವೇರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಪಲ್ಟಿಯಾಗಿದ್ದ ಬಸ್ನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ.
ಹಾವೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನ ನಿದ್ರೆಯ ಮಂಪರೇ ಅಪಘಾತಕ್ಕೆ ಕಾರಣವೇ ಅಥವಾ ಇತರೆ ತಾಂತ್ರಿಕ ಸಮಸ್ಯೆಯಿಂದ ಬಸ್ ನಿಯಂತ್ರಣ ತಪ್ಪಿತೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ.e



