ಬೆಂಗಳೂರು: ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ತಾಜ್ ಹೋಟೆಲ್ನಲ್ಲಿ ತಂದೆಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳನ್ನು ಹತ್ಯೆ ಮಾಡಿ ಬಳಿಕ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.
ಮೃತ ಮಕ್ಕಳನ್ನು ಶೇಕ್ ಜೆಹರಾ (5) ಹಾಗೂ ಶೇಕ್ ಜೋಯಾ (10) ಎಂದು ಗುರುತಿಸಲಾಗಿದೆ. ಮಕ್ಕಳ ತಂದೆ ಇಮ್ರಾನ್ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿ ಪ್ರಕಾರ, ಇಮ್ರಾನ್ ಬೆಂಗಳೂರಿನ ನಾಗವಾರ ನಿವಾಸಿಯಾಗಿದ್ದು, Zimmy ಕ್ಯಾಬ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮಕ್ಕಳನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಹೋಟೆಲ್ನಲ್ಲಿ ಮುಂಚಿತವಾಗಿ ಕೊಠಡಿ ಬುಕ್ ಮಾಡಿದ್ದ ಎನ್ನಲಾಗುತ್ತಿದೆ.
ತಾಜ್ ಹೋಟೆಲ್ನ ನಾಲ್ಕನೇ ಮಹಡಿಯ ಕೊಠಡಿಯಲ್ಲಿ ಇಬ್ಬರು ಮಕ್ಕಳನ್ನು ನೇಣು ಹಾಕಿ ಹತ್ಯೆ ಮಾಡಿದ ಬಳಿಕ ಇಮ್ರಾನ್ ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರ ನೋವಿನಿಂದ ಆತ ಚೀರಾಡಿದಾಗ ಹೋಟೆಲ್ ಸಿಬ್ಬಂದಿಗೆ ಘಟನೆ ತಿಳಿದುಬಂದಿದೆ. ಕೂಡಲೇ ಸಿಬ್ಬಂದಿ ಕೊಠಡಿಗೆ ತೆರಳಿ ಇಮ್ರಾನ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಏರ್ಪೋರ್ಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರು ಮಕ್ಕಳ ಸಾವಿಗೆ ಹಾಗೂ ಇಮ್ರಾನ್ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



