ನವದೆಹಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ನೀತಿ ಕಣಿವೆಯಲ್ಲಿ ಭಾರಿ ಮಳೆಯಿಂದಾಗಿ ನದಿಯಲ್ಲಿ ಪ್ರವಾಹದ ಪ್ರಮಾಣ ಹೆಚ್ಚಾಗಿದ್ದು, ನೀರಿನ ರಭಸಕ್ಕೆ ಲೋಹದ ಸೇತುವೆಯೊಂದು ಕ್ಷಣಾರ್ಧದಲ್ಲೇ ಕೊಚ್ಚಿಹೋದ ಘಟನೆ ನಡೆದಿದೆ.
ಭಾರಿ ಮಳೆಯಿಂದಾಗಿ ನದಿಯಲ್ಲಿ ಕೆಸರು ಮಿಶ್ರಿತ ನೀರು ರಭಸವಾಗಿ ಹರಿದುಬಂದಿದ್ದು, ಸೇತುವೆಗೆ ಅಪ್ಪಳಿಸಿದ ನೀರಿನ ವೇಗಕ್ಕೆ ಕೆಲವೇ ಸೆಕೆಂಡುಗಳಲ್ಲಿ ಸೇತುವೆ ಬುಡಮೇಲಾಗಿ ನದಿಯ ದಂಡೆಯತ್ತ ಕೊಚ್ಚಿಕೊಂಡು ಹೋಗಿದೆ.
ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸೇತುವೆ ಕೊಚ್ಚಿಹೋಗುವ ಸಂದರ್ಭದಲ್ಲಿ ನದಿಯ ಪಕ್ಕದ ರಸ್ತೆಯಲ್ಲಿ ಟ್ರಕ್ ಹಾಗೂ ಎಸ್‌ಯುವಿ ಕಾರೊಂದು ಸಂಚರಿಸುತ್ತಿದ್ದವು. ಅಪಾಯವನ್ನು ಅರಿತ ಚಾಲಕರು ಕೆಲವೇ ಕ್ಷಣಗಳ ಮುನ್ನ ವಾಹನಗಳನ್ನು ಹಿಂತಿರುಗಿಸಿದ್ದರಿಂದ ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.
ಸೇತುವೆ ಕೊಚ್ಚಿಹೋದ ಪರಿಣಾಮ ನೀತಿ ಕಣಿವೆ ಪ್ರದೇಶದ ಮುಖ್ಯ ಪಟ್ಟಣದೊಂದಿಗಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಪ್ರವಾಹದ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು, ಪರಿಸ್ಥಿತಿಯ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ.



