ಮಂಡ್ಯ: ಅಕ್ರಮ ಬಾಂಗ್ಲಾದೇಶಿ ವಲಸಿಗರು ಪ್ರಯಾಣಿಸುತ್ತಿದ್ದಾರೆಂಬ ಶಂಕೆಯ ಮೇಲೆ ಹಿಂದೂ ಕಾರ್ಯಕರ್ತರು ಕೆಎಸ್ಆರ್ಟಿಸಿ ಬಸ್ ತಡೆದು ಪರಿಶೀಲನೆ ನಡೆಸಿದ ಘಟನೆ ಮಂಡ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೆಂಗಳೂರಿನಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದರು. ಇವರನ್ನು ಬಾಂಗ್ಲಾದೇಶ ಮೂಲದವರು ಎಂದು ಶಂಕಿಸಿದ ಕಾರ್ಯಕರ್ತರು ಬಸ್ ತಡೆದು ವಿಚಾರಣೆ ನಡೆಸಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭಿಕ ವಿಚಾರಣೆಯಲ್ಲಿ ಬಸ್ನಲ್ಲಿದ್ದವರು ಅಸ್ಸಾಂ ಮೂಲದ ಕಾರ್ಮಿಕರಾಗಿದ್ದು, ಕೊಡಗಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ತೆರಳುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಆದರೂ ಪ್ರಯಾಣಿಕರ ಗುರುತು ಹಾಗೂ ದಾಖಲೆಗಳ ಕುರಿತು ಸಂಪೂರ್ಣ ಖಚಿತಪಡಿಸಿಕೊಳ್ಳಲು ಪೊಲೀಸರು ಎಲ್ಲರನ್ನೂ ನಿರಾಶ್ರಿತ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಅವರ ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ಮುಂದುವರಿದಿದೆ.
ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ಬಳಿಕವಷ್ಟೇ ಪ್ರಯಾಣಿಕರ ಮೂಲ ಹಾಗೂ ಗುರುತಿನ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.



