ಬೆಂಗಳೂರು: ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳ ಮೇಲೆ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, “ಜಂತರ್ ಮಂತರ್ನಲ್ಲಿ ಹೋರಾಟ ಮಾಡಿದವರು ಈಗ ಎಲ್ಲಿ ಮಾಯವಾಗಿದ್ದಾರೆ?” ಎಂದು ಕಾಂಗ್ರೆಸ್ ವಿರುದ್ಧ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಿಗಳನ್ನು ಪ್ರೇರೇಪಿಸುತ್ತಿದೆ ಎಂದು ಆರೋಪಿಸಿದರು. “ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್” ಎಂದು ಟೀಕಿಸಿದ ಅವರು, ತಮ್ಮ ಅನುಕೂಲಕ್ಕೆ ತಕ್ಕಂತೆ ಮಾತ್ರ ಹೋರಾಟ ಮಾಡುವುದು ಕಾಂಗ್ರೆಸ್ನ ಸ್ವಭಾವ ಎಂದು ವಾಗ್ದಾಳಿ ನಡೆಸಿದರು.
ನೀಟ್ ಪರೀಕ್ಷೆ ವಿಚಾರದಲ್ಲಿ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯನ್ನು ಉಲ್ಲೇಖಿಸಿದ ಛಲವಾದಿ ನಾರಾಯಣಸ್ವಾಮಿ, ವಿದ್ಯಾರ್ಥಿಗಳ ಹೆಸರಿನಲ್ಲಿ ಹೋರಾಟ ನಡೆಸಿ ಬಳಿಕ ನಡೆದ ಬೆಳವಣಿಗೆಗಳನ್ನು ದೇಶವೇ ನೋಡಿದೆ ಎಂದರು.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸುವ ಕಾಂಗ್ರೆಸ್, ಸೋರಿಕೆ ತಡೆಗಟ್ಟುವ ಕ್ರಮಗಳನ್ನೂ ವಿರೋಧಿಸುತ್ತದೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ ಅವರದ್ದು ದ್ವಿಮುಖ ನೀತಿ ಎಂದು ಟೀಕಿಸಿದರು.
ಜಾರ್ಖಂಡ್ನಲ್ಲಿ ವಿದ್ಯಾರ್ಥಿಗಳು ತಮಗಾದ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಅಲ್ಲಿನ ಕಾಂಗ್ರೆಸ್ ಮತ್ತು ಮಿತ್ರಪಕ್ಷಗಳ ಸರ್ಕಾರ ವಿದ್ಯಾರ್ಥಿಗಳನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಯುವಜನರ ಹೋರಾಟಕ್ಕೆ ಬಿಜೆಪಿ ಸದಾ ಬೆಂಬಲವಾಗಿ ನಿಲ್ಲಲಿದೆ. ದೇಶದ ಭದ್ರತೆ ಹಾಗೂ ಸುಭದ್ರತೆಗಾಗಿ ಎಲ್ಲರೂ ಕೆಲಸ ಮಾಡಬೇಕು ಎಂದು ಅವರು ಹೇಳಿದರು.



