ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ರೌಡಿಶೀಟರ್ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಪೀಣ್ಯದ ಗುಲ್ಬರ್ಗ ಕಾಲೋನಿಯಲ್ಲಿ ನಡೆದಿದೆ.
ಮೃತನನ್ನು ದೀಪಕ್ ಅಲಿಯಾಸ್ ದೀಪು ಎಂದು ಗುರುತಿಸಲಾಗಿದೆ. ಈತ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ ಎಂದು ತಿಳಿದುಬಂದಿದೆ.
ಎರಡು ದಿನಗಳ ಹಿಂದೆ ದೀಪು, ಈಶ್ವರ್ ನೇಪಾಳಿ ಹಾಗೂ ಸುಮನ್ ಅಲಿಯಾಸ್ ಪಾರಿವಾಳ ಎಂಬವರ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27ರ ರಾತ್ರಿ ದೀಪಕ್ ಮೇಲೆ 7ರಿಂದ 8 ಮಂದಿ ಇರುವ ಗ್ಯಾಂಗ್ ದಾಳಿ ನಡೆಸಿದೆ.
ದಾಳಿ ವೇಳೆ ದುಷ್ಕರ್ಮಿಗಳು ದೀಪಕ್‌ಗೆ ಚಾಕುವಿನಿಂದ ಇರಿದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ದೀಪಕ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಮಾರ್ಗಮಧ್ಯೆಯೇ ಆತ ಮೃತಪಟ್ಟಿದ್ದಾನೆ.
ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

