ಬೀದರ್: ಬೀದರ್ ನಗರದಲ್ಲಿ 2025ರ ಜನವರಿ 16ರಂದು ಹಾಡಹಗಲೇ ನಡೆದಿದ್ದ ಎಟಿಎಂ ದರೋಡೆ ಹಾಗೂ ಕೊಲೆ ಪ್ರಕರಣಕ್ಕೆ ಕೊನೆಗೂ ತೆರೆ ಬಿದ್ದಿದೆ.
ಬರೋಬ್ಬರಿ 19 ತಿಂಗಳ ಬಳಿಕ ಬೀದರ್ ಪೊಲೀಸರು ಬಿಹಾರದಲ್ಲಿ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಲೋಕ್ ಹಾಗೂ ಅಮನ್ ಎಂದು ಗುರುತಿಸಲಾಗಿದೆ.
ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ ಸುಮಾರು 50 ಸಿಬ್ಬಂದಿಯನ್ನು ಒಳಗೊಂಡ ವಿಶೇಷ ಪೊಲೀಸ್ ತಂಡ ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳನ್ನು ಬೀದರ್ಗೆ ಕರೆತರಲಾಗುತ್ತಿದೆ.
ಆರೋಪಿಗಳ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಬೀದರ್ ನಗರದ ಜನರು ಪಟಾಕಿ ಸಿಡಿಸಿ ಪೊಲೀಸರ ಕಾರ್ಯಾಚರಣೆಯನ್ನು ಸ್ವಾಗತಿಸಿ ಸಂಭ್ರಮಿಸಿದರು.
2025ರ ಜನವರಿ 16ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಬೀದರ್ನ ಶಿವಾಜಿ ವೃತ್ತದ ಬಳಿ ಇರುವ ಎಸ್ಬಿಐ ಎಟಿಎಂಗೆ ನಗದು ತುಂಬಿಸಲು ಸಿಬ್ಬಂದಿ ವಾಹನದಲ್ಲಿ ಆಗಮಿಸಿದ್ದರು. ಈ ವೇಳೆ ಪಿಸ್ತೂಲ್ ಹಿಡಿದು ಬಂದಿದ್ದ ದುಷ್ಕರ್ಮಿಗಳು ಸಿಬ್ಬಂದಿಯ ಮೇಲೆ ಗುಂಡಿನ ದಾಳಿ ನಡೆಸಿ ಸುಮಾರು ₹83 ಲಕ್ಷ ನಗದು ದೋಚಿಕೊಂಡು ಪರಾರಿಯಾಗಿದ್ದರು.
ದರೋಡೆಕೋರರು ನಡೆಸಿದ ಗುಂಡಿನ ದಾಳಿಯಲ್ಲಿ ಬೀದರ್ ನಿವಾಸಿ ಗಿರಿ ವೆಂಕಟೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ ಗಾಯಗೊಂಡಿದ್ದರು. ಹಾಡಹಗಲೇ ನಡೆದಿದ್ದ ಈ ಘಟನೆ ರಾಜ್ಯಾದ್ಯಂತ ಭಾರೀ ಆತಂಕಕ್ಕೆ ಕಾರಣವಾಗಿತ್ತು.
ಪೊಲೀಸರ ತನಿಖೆಯಲ್ಲಿ ದರೋಡೆಕೋರರು ಕೃತ್ಯಕ್ಕೂ ಮುನ್ನವೇ ಸಂಪೂರ್ಣ ಸಂಚು ರೂಪಿಸಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿತ್ತು. ದರೋಡೆಗೆ ಎರಡು ದಿನ ಮುನ್ನವೇ ಆರೋಪಿಗಳು ಬೀದರ್ನಲ್ಲಿ ತಂಗಿದ್ದರು. ಹಣ ದೋಚಿದ ಬಳಿಕ ಯಾವ ಮಾರ್ಗದಲ್ಲಿ ಪರಾರಿಯಾಗಬೇಕು ಎಂಬುದನ್ನೂ ಮೊದಲೇ ಯೋಜಿಸಿಕೊಂಡಿದ್ದರು ಎನ್ನಲಾಗಿದೆ.
ಸುದೀರ್ಘ ತನಿಖೆ ಹಾಗೂ ಕಾರ್ಯಾಚರಣೆಯ ಬಳಿಕ ಇದೀಗ ಬಿಹಾರದಲ್ಲಿ ಇಬ್ಬರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದು, ಪ್ರಕರಣದ ತನಿಖೆಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆಯಿದೆ.



