ಬೆಂಗಳೂರು: ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಪೊಲೀಸರು ತಡೆಯೊಡ್ಡಲು ಮುಂದಾಗುತ್ತಿದ್ದಂತೆ ವಾಟಾಳ್ ನಾಗರಾಜ್ ಅವರು ತಮ್ಮ ನಿವಾಸದ ಗೇಟ್‌ನ ಒಳಭಾಗದಲ್ಲೇ ಕುಳಿತು ಪ್ರತಿಭಟನೆ ನಡೆಸಿದರು.
ತಮ್ಮನ್ನು ವಶಕ್ಕೆ ಪಡೆಯಲು ಪೊಲೀಸರು ಮನೆಗೆ ಬಂದಿರುವುದನ್ನು ವಿರೋಧಿಸಿದ ವಾಟಾಳ್ ನಾಗರಾಜ್, “ನಾನು ಮನೆಯಿಂದ ಹೊರಗೆ ಬರುವುದಿಲ್ಲ, ವಶಕ್ಕೆ ಪಡೆಯುವ ಕಾರಣಕ್ಕಾಗಿ ಹೊರಬರುವುದಿಲ್ಲ” ಎಂದು ಪಟ್ಟು ಹಿಡಿದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸರ್ಕಾರದ ನಿಲುವನ್ನು ಖಂಡಿಸಿ ವಾಟಾಳ್ ನಾಗರಾಜ್ ಅವರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಬಾಯಿಗೆ ಸೆಲ್ಲೋ ಟೇಪ್ ಹಾಕಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ತಡೆಯಲು ಎಸಿಪಿ ತನ್ವೀರ್ ಹಾಗೂ ಡಿಸಿಪಿ ನೇಮಗೌಡ ನೇತೃತ್ವದ ಪೊಲೀಸ್ ಅಧಿಕಾರಿಗಳ ತಂಡ ವಾಟಾಳ್ ನಾಗರಾಜ್ ಅವರ ನಿವಾಸಕ್ಕೆ ಆಗಮಿಸಿತ್ತು. ಸುಮಾರು ಅರ್ಧ ಗಂಟೆಗಳ ಕಾಲ ಪೊಲೀಸರು ಅವರನ್ನು ಮನವೊಲಿಸಲು ಪ್ರಯತ್ನಿಸಿದರು.
ಆದರೆ, ಸರ್ಕಾರದ ನಿಲುವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ ಅವರು ಪೊಲೀಸರ ಮನವೊಲಿಕೆಗೆ ಒಪ್ಪಲಿಲ್ಲ. ಕೊನೆಗೆ ಬೇರೆ ಯಾವುದೇ ಆಯ್ಕೆ ಇಲ್ಲದೆ ಪೊಲೀಸರು ಅವರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಕರೆದೊಯ್ದರು.
ಇದಕ್ಕೂ ಮುನ್ನ ಬೆಳಗ್ಗೆಯೇ ವಾಟಾಳ್ ನಾಗರಾಜ್ ಅವರ ನಿವಾಸಕ್ಕೆ ಆಗಮಿಸಿದ್ದ ಬೆಂಬಲಿಗ ನಾರಾಯಣ್ ಸೇರಿದಂತೆ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಅವರನ್ನು ಹೊಯ್ಸಳ ವಾಹನದಲ್ಲಿ ಕರೆದೊಯ್ಯಲಾಯಿತು.
ಪೊಲೀಸರ ಕ್ರಮಕ್ಕೆ ವಾಟಾಳ್ ನಾಗರಾಜ್ ಅವರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಹಾಗೂ ಪೊಲೀಸರು ಜಂಟಿಯಾಗಿ ಕನ್ನಡಪರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಬೇಕು ಎಂದು ಆಗ್ರಹಿಸಿ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ನಡೆಸುತ್ತಿದ್ದು, ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.



