HomeKarnataka Newsನನ್ನ ಮನೆಯ ಬಳಿ ಮಹಜರು ನಾಟಕ ಮಾಡಲಾಗಿದೆ: ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ಕಿಡಿ

ನನ್ನ ಮನೆಯ ಬಳಿ ಮಹಜರು ನಾಟಕ ಮಾಡಲಾಗಿದೆ: ಚುನಾವಣಾ ಆಯೋಗದ ವಿರುದ್ಧ ಪ್ರಕಾಶ್ ರಾಜ್ ಕಿಡಿ

For Dai;y Updates Join Our whatsapp Group

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ ಚುನಾವಣಾ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟಿರುವ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿರುವ ಅವರು, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆಯೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ತಮ್ಮ ಮತದಾರರ ಗುರುತಿನ ಚೀಟಿ ಖಾಯಂ ಆಗಿ ವರ್ಗಾವಣೆಯಾಗಿದೆ. ಹೀಗಾಗಿ ಫಾರ್ಮ್-6 ಭರ್ತಿ ಮಾಡಿ ಹೊಸ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವಂತೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ತೋರಿಸಲಾಗಿತ್ತು. ಇದು ನಿಜವಲ್ಲವೇ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದ್ದಾರೆ.

ಈ ವಿಚಾರವನ್ನು ತಾವು ಪ್ರಸ್ತಾಪಿಸಿದ ಬಳಿಕ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಕರೆ ಮಾಡಿ ತಪ್ಪಾಗಿದೆ, ಸರಿಪಡಿಸುತ್ತೇವೆ ಎಂದು ತಿಳಿಸಿದ್ದರು. ಅಲ್ಲದೆ, ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತೆ ಮನವಿ ಮಾಡಿದ್ದರು ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ಆದರೆ, ಅದೇ ದಿನ ಸಂಜೆ ಸುದ್ದಿಗೋಷ್ಠಿ ನಡೆಸಿ ತಮ್ಮ ಹೆಸರು ಡಿಲೀಟ್ ಆಗಿಲ್ಲ, ಬದಲಾಗಿ ವರ್ಗಾವಣೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದು ಸತ್ಯಕ್ಕೆ ವಿರುದ್ಧವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ವಿಷಯ ಕೈಮೀರಿ ಹೋಗುತ್ತಿದ್ದಂತೆ ರಾತ್ರಿ ಸುಮಾರು 8.30ರ ವೇಳೆಗೆ ಬಿಎಲ್‌ಒ ಸಿಬ್ಬಂದಿಯನ್ನು ಕ್ಯಾಮೆರಾದೊಂದಿಗೆ ತಮ್ಮ ಹಳೆಯ ಮನೆ ವಿಳಾಸಕ್ಕೆ ಕಳುಹಿಸಲಾಗಿತ್ತು ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ.

ಅಲ್ಲಿ ನೆರೆಹೊರೆಯವರನ್ನು ಕರೆದು ಮಹಜರು ನಡೆಸಿದಂತೆ ಮಾಡಿ, ಅದರ ದೃಶ್ಯಗಳನ್ನು ಬಳಿಕ ಕೆಲವು ಮಾಧ್ಯಮಗಳು ಹಾಗೂ ಬಿಜೆಪಿ ಪರ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ನೀಡಿ, ತಾವು ಹೇಳಿದ್ದು ತಪ್ಪು ಎಂಬಂತೆ ಬಿಂಬಿಸಲು ಪ್ರಯತ್ನಿಸಲಾಗಿದೆ ಎಂದು ಅವರು ದೂರಿದ್ದಾರೆ.

ತಾವು ವೃತ್ತಿಯಿಂದ ನಟ ಹಾಗೂ ಸೆಲೆಬ್ರಿಟಿಯಾಗಿರಬಹುದು. ಆದರೆ ನಾಗರಿಕನಾಗಿ ಪ್ರತಿಯೊಬ್ಬ ಸಾಮಾನ್ಯ ಪ್ರಜೆಯಂತೆ ತಮಗೂ ಸಮಾನ ಹಕ್ಕುಗಳಿವೆ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ತಮ್ಮ ಹೋರಾಟ ಕೇವಲ ವೈಯಕ್ತಿಕ ವಿಚಾರವಲ್ಲ. ಪ್ರತಿಯೊಬ್ಬ ನಾಗರಿಕನ ಆತ್ಮಗೌರವ ಮತ್ತು ಮತದಾನದ ಹಕ್ಕಿನ ಹೋರಾಟವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರತಿ ಐದು ವರ್ಷಕ್ಕೊಮ್ಮೆ ಮತದಾರರ ಮುಂದೆ ಬಂದು ಮತಕ್ಕಾಗಿ ಕೈಮುಗಿದು ಮನವಿ ಮಾಡುವ ರಾಜಕೀಯ ನಾಯಕರು, ಅದೇ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಲಿನಲ್ಲಿ ನಿಂತು ಬೇಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಿರುವ ಪ್ರಕಾಶ್ ರಾಜ್, “ಇದೇನು ನಾಟಕ? ಇದೇನು ರಾಜಕೀಯ? ನಿಮ್ಮ ಅಜೆಂಡಾ ಏನು?” ಎಂದು ಚುನಾವಣಾ ವ್ಯವಸ್ಥೆಯನ್ನು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿನ ತಮ್ಮ ಹೆಸರು ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳ ಕ್ರಮದ ಕುರಿತು ಪ್ರಕಾಶ್ ರಾಜ್ ಮಾಡಿರುವ ಆರೋಪಗಳು ಇದೀಗ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img