ಹಾವೇರಿ: ಸಾಮಾಜಿಕ ಜಾಲತಾಣಗಳಲ್ಲಿ AI ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ವಿಡಿಯೋಗಳ ಮೂಲಕ ಜನರನ್ನು ವಂಚಿಸುವ ಜಾಲ ಸಕ್ರಿಯವಾಗಿದ್ದು, ಹಾವೇರಿಯ ವ್ಯಕ್ತಿಯೊಬ್ಬರು ಇಂತಹ ವಂಚನೆಗೆ ಬಲಿಯಾಗಿ 22 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದಾರೆ.
ಈ ಸಂಬಂಧ ಹಾವೇರಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೈಬರ್ ವಂಚಕರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಹೆಸರಿನಲ್ಲಿ ಎಐ ವಿಡಿಯೋಗಳನ್ನು ಸೃಷ್ಟಿಸಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿದ್ದಾರೆ. ‘BXB ಮಾರ್ಕೆಟ್’ ಹೆಸರಿನ ಜಾಹೀರಾತಿನಲ್ಲಿ ಕೇವಲ 22 ಸಾವಿರ ರೂ. ಹೂಡಿಕೆ ಮಾಡಿದರೆ ಎರಡು ಪಟ್ಟು, ಮೂರು ಪಟ್ಟು ಲಾಭದೊಂದಿಗೆ 25 ಲಕ್ಷ ರೂ.ವರೆಗೆ ಗಳಿಸಬಹುದು ಎಂದು ನಂಬಿಸಲಾಗಿತ್ತು.
ಇದನ್ನು ನಂಬಿದ ಸಂತ್ರಸ್ತರು ವಿಡಿಯೋದಲ್ಲಿದ್ದ ಟೆಲಿಗ್ರಾಮ್ ಲಿಂಕ್ ಬಳಸಿ ಆರ್ಟಿಜಿಎಸ್ ಮತ್ತು ಐಎಂಪಿಎಸ್ ಮೂಲಕ ಹಂತ ಹಂತವಾಗಿ 22 ಲಕ್ಷಕ್ಕೂ ಅಧಿಕ ಹಣ ವರ್ಗಾಯಿಸಿದ್ದಾರೆ. ಆದರೆ ಯಾವುದೇ ಲಾಭ ಸಿಗದೇ ಸಂಪೂರ್ಣ ಹಣ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ಮೊಬೈಲ್ಗೆ ಬರುವ ಅನುಮಾನಾಸ್ಪದ ಲಿಂಕ್ಗಳನ್ನು ಕ್ಲಿಕ್ ಮಾಡಬಾರದು, ಒಟಿಪಿ ಸೇರಿದಂತೆ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಹಾಗೂ ಪರಿಶೀಲಿಸದ ಹೂಡಿಕೆ ಯೋಜನೆಗಳಿಗೆ ಹಣ ವರ್ಗಾಯಿಸಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯರು ಕೂಡ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಗಣ್ಯರ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಸೈಬರ್ ವಂಚನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.



