HomePolitics Newsಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ!

ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ!

For Dai;y Updates Join Our whatsapp Group

ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಜಿ.ಎಸ್. ಪಾಟೀಲ್ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಪ್ರದಾಯದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್‌ ಅವರು ಜಿ.ಎಸ್. ಪಾಟೀಲ್ ಅವರನ್ನು ಸ್ಪೀಕರ್‌ ಪೀಠಕ್ಕೆ ಕರೆತಂದು ಕೂರಿಸಿದರು.

ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಹಂಗಾಮಿ ಸ್ಪೀಕರ್‌ ಜಯಚಂದ್ರ ಅವರು ಸದನದಲ್ಲಿ ರೂಲಿಂಗ್ ನೀಡಿದರು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಸ್ಪೀಕರ್‌ ಸ್ಥಾನಕ್ಕೆ ಜಿ.ಎಸ್. ಪಾಟೀಲ್ ಅವರ ಹೆಸರನ್ನು ಪ್ರಸ್ತಾಪಿಸಿದರು.

ಈ ಪ್ರಸ್ತಾವನೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅನುಮೋದನೆ ನೀಡಿದರು. ಬಳಿಕ ಹಂಗಾಮಿ ಸ್ಪೀಕರ್‌ ಪ್ರಸ್ತಾವನೆಯನ್ನು ಮತಕ್ಕೆ ಹಾಕಿದರು. ಪ್ರಸ್ತಾವನೆ ಅಂಗೀಕಾರವಾದ ನಂತರ ಜಿ.ಎಸ್. ಪಾಟೀಲ್ ಅವರು ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಅವಿರೋಧವಾಗಿ ಆಯ್ಕೆಯಾದರು. ಸ್ಪೀಕರ್‌ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸದನದ ಕಲಾಪಕ್ಕೆ ವಿಪಕ್ಷ ಬಿಜೆಪಿ ಸದಸ್ಯರು ಪ್ರವೇಶಿಸಿದರು.

‘ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ’

ಸ್ಪೀಕರ್‌ ಆಯ್ಕೆಗೂ ಮುನ್ನ ಸದನವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ತಮ್ಮ ರಾಜಕೀಯ ಚಿಂತನೆಗಳು ಹಾಗೂ ಯೋಜನೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡುವುದಾಗಿ ಹೇಳಿದರು.

ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಯಾರಿಗೂ ತೊಂದರೆ ನೀಡುವ ಉದ್ದೇಶ ತಮ್ಮದಲ್ಲ. ಯಾರಿಗೆ ಎಷ್ಟು ಗೌರವ ನೀಡಬೇಕೋ ಅಷ್ಟೇ ಗೌರವ ನೀಡುತ್ತೇನೆ ಎಂದು ಅವರು ಹೇಳಿದರು.

ಹಿಂದೆ ಇದೇ ಸದನದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಕುಳಿತುಕೊಂಡು, ‘ಒನ್ ಮ್ಯಾನ್ ವಿತ್ ಕರೇಜ್ ಮೇಕ್ಸ್ ಮೇಜಾರಿಟಿ’ ಎಂದು ಹೇಳಿದ್ದನ್ನು ಡಿಕೆ ಶಿವಕುಮಾರ್‌ ನೆನಪಿಸಿಕೊಂಡರು. ಸಿದ್ದರಾಮಯ್ಯ ಸೇರಿದಂತೆ ತಮ್ಮ ಸಂಖ್ಯೆ 136 ಎಂದು ಹೇಳಿದ್ದೆ. ನಾವೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಇರಲಿದ್ದೇವೆ ಎಂದು ಅವರು ತಿಳಿಸಿದರು. 2028ರ ಚುನಾವಣೆಯಲ್ಲಿ ಏನಾಗಬೇಕು ಎಂಬುದನ್ನು ರಾಜ್ಯದ ಜನರು ತೀರ್ಮಾನಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

‘ನಾನು ಫುಟ್‌ಬಾಲ್ ಆಡೋನಲ್ಲ, ಚೆಸ್ ಆಡೋನೂ ಅಲ್ಲ’

ತಮಗೆ ರಾಜಕಾರಣ ಗೊತ್ತಿದೆ ಎಂದು ಹೇಳಿದ ಡಿಕೆ ಶಿವಕುಮಾರ್‌, ‘ನಾನು ಫುಟ್‌ಬಾಲ್ ಆಡುವವನಲ್ಲ, ಚೆಸ್ ಆಡುವವನೂ ಅಲ್ಲ’ ಎಂದು ರಾಜಕೀಯದ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾತನಾಡಿದರು.

ವಿಪಕ್ಷಗಳು ಹಾಗೂ ಆಡಳಿತ ಪಕ್ಷದವರು ಒಟ್ಟಾಗಿ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದರು. ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಇಲ್ಲಿರುವವರು ನಾಳೆ ಅಲ್ಲಿರಬಹುದು, ಅಲ್ಲಿರುವವರು ಇಲ್ಲಿಗೆ ಬರಬಹುದು. ನಾವು ಎಲ್ಲರೂ ರಾಜ್ಯದ ಹಿತಕ್ಕಾಗಿ ಜನರಿಂದ ಆಯ್ಕೆಯಾಗಿದ್ದೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

‘ವಿಶ್ವಾಸದ ಮೇಲೆ ಬದುಕಬೇಕು’

ಹಂಗಾಮಿ ಸ್ಪೀಕರ್‌ ಜಯಚಂದ್ರ ಅವರನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್‌, ನೀವು ಹಿರಿಯರು. ದೇವರು ನಿಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದ್ದಾನೆ ಎಂದು ಹೇಳಿದರು.

ಈ ಸ್ಥಾನದಲ್ಲಿ ಕುಳಿತಿದ್ದವರು ಮುಂದೆ ಮುಖ್ಯಮಂತ್ರಿಗಳಾಗಿದ್ದಾರೆ ಎಂದು ಉದಾಹರಣೆ ನೀಡಿದ ಅವರು, ಎಸ್.ಎಂ. ಕೃಷ್ಣ ಹಾಗೂ ಜಗದೀಶ್ ಶೆಟ್ಟರ್‌ ಅವರು ಸ್ಪೀಕರ್‌ ಸ್ಥಾನದಲ್ಲಿದ್ದು ಬಳಿಕ ಮುಖ್ಯಮಂತ್ರಿಗಳಾದ ಸಂದರ್ಭವನ್ನು ಉಲ್ಲೇಖಿಸಿದರು.

ಹಾಗೆಯೇ ಖಾದರ್‌ ಅವರು ಸ್ಪೀಕರ್‌ ಸ್ಥಾನದಲ್ಲಿ ಕುಳಿತಿದ್ದರು. ಇದೀಗ ಅವರು ‘ಡಬಲ್ ಧಮಾಕಾ’ ಪಡೆದಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹಾಸ್ಯಮಿಶ್ರಿತವಾಗಿ ಹೇಳಿದರು. ‘ವಿಶ್ವಾಸ ಇಡಿ, ವಿಶ್ವಾಸದ ಮೇಲೆ ಬದುಕಬೇಕು’ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್‌ ಅವರು ಸದನದ ಸದಸ್ಯರಿಗೆ ಕಿವಿಮಾತು ಹೇಳಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img