ಆಸ್ಟ್ರೇಲಿಯಾದಲ್ಲಿ ನಡೆದ 17ನೇ ‘ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್’ (IFFM 2026) ವಿಜೇತರ ಪಟ್ಟಿ ಬಿಡುಗಡೆಯಾಗಿದೆ. ಭಾರತೀಯ ಸಿನಿಮಾದ ವಿವಿಧ ಭಾಷೆಗಳ ಕಥೆ, ಪ್ರತಿಭೆ ಮತ್ತು ತಾಂತ್ರಿಕ ಸಾಧನೆಗಳನ್ನು ಗುರುತಿಸುವ ಈ ಚಲನಚಿತ್ರೋತ್ಸವದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಮತ್ತು ಉತ್ತರ ಭಾರತದ ಹಲವು ಪ್ರಮುಖ ಕಲಾವಿದರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ನೀಡಲಾಗಿದೆ. ಭಾರತೀಯ ಸಿನಿಮಾದಲ್ಲಿ ಅವರ ವಿಶಿಷ್ಟ ಕೊಡುಗೆ ಹಾಗೂ ಸಾಂಸ್ಕೃತಿಕ ಕಥೆಗಳನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಸಾಧನೆಯನ್ನು ಗುರುತಿಸಿ ‘ಲೀಡರ್ಶಿಪ್ ಇನ್ ಸಿನಿಮಾ’ ಗೌರವವನ್ನೂ ಅವರಿಗೆ ನೀಡಲಾಗಿದೆ.
ಭಾರತೀಯ ಚಿತ್ರರಂಗದ ಹಿರಿಯ ನಟಿ ರೇಖಾ ಅವರಿಗೆ ‘ಎಕ್ಸಲೆನ್ಸ್ ಇನ್ ಸಿನಿಮಾ’ ಪ್ರಶಸ್ತಿ ದೊರೆತಿದೆ. ರಾಣಿ ಮುಖರ್ಜಿ ಅವರ 30 ವರ್ಷಗಳ ಯಶಸ್ವಿ ಸಿನಿಮಾ ಪಯಣವನ್ನು ವಿಶೇಷವಾಗಿ ಗೌರವಿಸಲಾಗಿದೆ. ನಟ ಪಂಕಜ್ ತ್ರಿಪಾಠಿ ‘ಆರ್ಟಿಸ್ಟ್ ಆಫ್ ಡಿಸ್ಟಿಂಕ್ಷನ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಲೋಕಾ ಚಾಪ್ಟರ್ 1: ಚಂದ್ರ’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ. ‘ದಿ ಗ್ರೇಟ್ ಶಂಸುದ್ದೀನ್ ಫ್ಯಾಮಿಲಿ’ಗೆ ವಿಶೇಷ ಉಲ್ಲೇಖ ಲಭಿಸಿದೆ.
‘ನಾಟ್ ಎ ಹೀರೊ’ ಅತ್ಯುತ್ತಮ ಇಂಡಿ ಸಿನಿಮಾ ಪ್ರಶಸ್ತಿ ಗೆದ್ದರೆ, ‘ಕಿಕ್ಕ್ರನ್ ದೇ ಫುಲ್’ ಇಂಡಿ ವಿಭಾಗದಲ್ಲಿ ವಿಶೇಷ ಉಲ್ಲೇಖ ಪಡೆದಿದೆ.
ನಟರ ವಿಭಾಗದಲ್ಲಿ ದುಲ್ಕರ್ ಸಲ್ಮಾನ್ ‘ಕಾಂತಾ’ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ಫುಲ್ ಪ್ಲೇಟ್’ ಚಿತ್ರಕ್ಕಾಗಿ ಕೀರ್ತಿ ಕುಲ್ಹಾರಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಧುಶ್ರೀ ದತ್ತಾ ನಿರ್ದೇಶನದ ‘ಫ್ಲೈಯಿಂಗ್ ಟೈಗರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ಪ್ರೇಕ್ಷಕರ ಆಯ್ಕೆಯ ‘ಪೀಪಲ್ಸ್ ಚಾಯ್ಸ್’ ಪ್ರಶಸ್ತಿ ಹಿಂದಿಯ ‘ಸೈಯಾರಾ’ ಪಾಲಾಗಿದೆ. ‘ಲಾಲಾ ಅಂಡ್ ಪಾಪಿ’ಗೆ ‘ರೈನ್ಬೋ ಸ್ಟೋರಿಟೆಲ್ಲರ್’ ಗೌರವ ಸಿಕ್ಕಿದೆ.
ವೆಬ್ ಸರಣಿ ವಿಭಾಗದಲ್ಲಿ ‘ಮಟ್ಕಾ ಕಿಂಗ್’ಗಾಗಿ ವಿಜಯ್ ವರ್ಮಾ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ‘ದೆಹಲಿ ಕ್ರೈಮ್’ ಸೀಸನ್ 3ಗಾಗಿ ರಸಿಕಾ ದುಗ್ಗಲ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
‘ಫ್ರೀಡಮ್ ಅಟ್ ಮಿಡ್ನೈಟ್ – ಸೀಸನ್ 2’ ಅತ್ಯುತ್ತಮ ಸರಣಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಒಟ್ಟಾರೆ IFFM 2026 ಪ್ರಶಸ್ತಿ ಪ್ರದಾನ ಸಮಾರಂಭವು ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳ ಪ್ರತಿಭೆ ಮತ್ತು ವಿಭಿನ್ನ ಕಥನಗಳಿಗೆ ಜಾಗತಿಕ ವೇದಿಕೆಯಲ್ಲಿ ದೊರೆಯುತ್ತಿರುವ ಮನ್ನಣೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ರಿಷಬ್ ಶೆಟ್ಟಿಗೆ ದೊರೆತ ಡಬಲ್ ಗೌರವ ಕನ್ನಡ ಚಿತ್ರರಂಗದ ಪಾಲಿಗೆ ಈ ಬಾರಿಯ ಪ್ರಮುಖ ಹೈಲೈಟ್ ಆಗಿದೆ.



