ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹಿರಿಯರನ್ನು ಸ್ಮರಿಸುವ ದಿನವೇ ಆಗಸ್ಟ್ 15. ದೇಶಕ್ಕಾಗಿ ಹೋರಾಡಿದ ಮಹನೀಯರ ದೇಶಪ್ರೇಮವನ್ನು ನೆನೆಯುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದ್ದು, ಈ ದಿನ ಭಾರತೀಯರಿಗೆ ಸುದಿನವಾಗಿದೆ ಎಂದು ಗೃಹರಕ್ಷಕ ದಳದ ನರೇಗಲ್ಲ ಘಟಕದ ಅಧಿಕಾರಿ ಸುರೇಶ ಹಳ್ಳಿಕೇರಿ ಹೇಳಿದರು.
ನರೇಗಲ್ಲದ ಗೃಹರಕ್ಷಕ ದಳದ ಕಾರ್ಯಾಲಯದಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ನಿಡಗುಂದಿ ಅನ್ನದಾನೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ಕೊಪ್ಪದ ಮಾತನಾಡಿ, ಸೇವೆ ಮಾಡುವ ಅವಕಾಶ ಎಲ್ಲರಿಗೂ ದೊರೆಯುವುದಿಲ್ಲ. ಆದರೆ ವೃತ್ತಿಯ ಕರ್ತವ್ಯದ ಜೊತೆಗೆ ದೇಶಸೇವೆಯನ್ನೂ ಮಾಡುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿಯ ಸೇವೆ ಶ್ಲಾಘನೀಯ. ದೇಶದ ಶಾಂತಿ, ಸುರಕ್ಷತೆ ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕ ದಳದ ಸೇವೆ ಮಹತ್ವದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸದಸ್ಯರು ಸಮಾನತೆ, ಸಹೋದರತ್ವ ಹಾಗೂ ಸಾಮರಸ್ಯದೊಂದಿಗೆ ಬಾಳುವುದರ ಜೊತೆಗೆ ದೇಶದ ಪ್ರಗತಿಗಾಗಿ ಒಗ್ಗಟ್ಟಿನಿಂದ ಶ್ರಮಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಎಂ.ಬಿ. ಗೋಡಿ, ಪಿ.ಎಸ್. ಸಾಬಳೆ, ಜೆ.ಡಿ. ಬಂಡೀವಡ್ಡರ, ವಿ.ವಿ. ಇಟಗಿ, ಕೆ.ವಿ. ಹಾಳಕೇರಿ, ಎಸ್.ವೈ. ಕುಂಬಾರ, ಎಂ.ಬಿ. ಕಡೆತೋಟದ, ಎಸ್.ವಿ. ಮುಸಿಗೇರಿ, ಬಿ.ಬಿ. ನೆಲ್ಲೂರ, ಎ.ಬಿ. ಕುರುಡಗಿ, ವಿರೂಪಾಕ್ಷ ಇಟಗಿ, ಎಂ.ಕೆ. ಅರಮನಿ, ಎಸ್.ಬಿ. ಸವಡಿ ಸೇರಿದಂತೆ ಹಲವಾರು ಗೃಹರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.



