ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಚನ ಸಾಹಿತ್ಯ ಕೇವಲ ಸಾಹಿತ್ಯದ ಪ್ರಕಾರವಲ್ಲ, ಅದು ಸಾಮಾಜಿಕ ಪರಿವರ್ತನೆಯ ಶಕ್ತಿಶಾಲಿ ಮಾಧ್ಯಮ. ವಚನಕಾರ್ತಿಯರು ತಮ್ಮ ಅಂತರಂಗದ ಅನುಭವ, ಆತ್ಮಾಭಿಮಾನ ಹಾಗೂ ವೈಚಾರಿಕ ಪ್ರಜ್ಞೆಯ ಮೂಲಕ ಅಸಮಾನತೆ, ಕಂದಾಚಾರ ಮತ್ತು ತಾರತಮ್ಯಗಳನ್ನು ಪ್ರಶ್ನಿಸಿ, ಸಮಾನತೆ ಹಾಗೂ ಮಾನವೀಯತೆಯ ದೀವಿಗೆಯನ್ನು ಬೆಳಗಿಸಿದ್ದಾರೆ ಎಂದು ಪೂಜ್ಯ ಶಿವಶರಣೆ ಡಾ. ನೀಲಮ್ಮತಾಯಿ ಅಸುಂಡಿ ಹೇಳಿದರು.
ಲಕ್ಷ್ಮೇಶ್ವರದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ‘ಶ್ರಾವಣ ಸಂಜೆ’ ಕಾರ್ಯಕ್ರಮದಲ್ಲಿ ಶ್ರೀಮತಿ ಲಲಿತಾ ಕೆರಿಮನಿ ಹಾಗೂ ಶ್ರೀಮತಿ ಮೇಘಾ ಹುಕ್ಕೇರಿ ಸಂಪಾದಿಸಿರುವ ‘ಸಮಾನತೆ ಸಾರಿದ ವಚನಕಾರ್ತಿಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವಚನಕಾರ್ತಿಯರ ನುಡಿಗಳು ಅಂದಿನ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಲ್ಲದೆ, ಮಹಿಳೆಯ ಅಸ್ತಿತ್ವ, ಸ್ವಾಭಿಮಾನ ಹಾಗೂ ಆತ್ಮಗೌರವದ ಪ್ರತೀಕವಾಗಿವೆ. ತಮ್ಮ ಅನುಭವದ ನೆಲೆಯಲ್ಲಿ ಕಟ್ಟಿಕೊಟ್ಟ ವಿಚಾರಗಳನ್ನು ಕಾಲದ ಗಡಿಯನ್ನು ದಾಟಿಸಿ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿಸಿದ್ದಾರೆ. ಮಹಿಳೆಯರಿಗೆ ಸಮಾನ ಅವಕಾಶ, ಗೌರವ ಹಾಗೂ ಸ್ವಾತಂತ್ರ್ಯ ದೊರೆಯಬೇಕೆಂಬ ಆಶಯವನ್ನು ಅವರು ಶತಮಾನಗಳ ಹಿಂದೆಯೇ ಪ್ರತಿಪಾದಿಸಿದ್ದರು ಎಂದರು.
‘ಶ್ರಾವಣ ಸಂಜೆ’ ಕಾರ್ಯಕ್ರಮ ಎರಡು ದಶಕಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ‘ಸಮಾನತೆ ಸಾರಿದ ವಚನಕಾರ್ತಿಯರು’ ಕೃತಿ ಹೊರತಂದಿರುವುದು ಅರ್ಥಪೂರ್ಣ ಹಾಗೂ ಅಭಿನಂದನೀಯ ಕಾರ್ಯವಾಗಿದೆ. ವಚನಕಾರ್ತಿಯರ ಚಿಂತನೆಗಳನ್ನು ಒಂದೆಡೆ ದಾಖಲಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಕೃತಿಯ ಸಂಪಾದಕರು ಸಾಹಿತ್ಯಿಕ ಹಾಗೂ ಸಾಮಾಜಿಕ ಹೊಣೆಗಾರಿಕೆ ಮೆರೆದಿದ್ದಾರೆ ಎಂದು ಡಾ. ನೀಲಮ್ಮತಾಯಿ ಅಸುಂಡಿ ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರತಿಮಾ ಮಹಾಜನಶೆಟ್ಟರ ಮಾತನಾಡಿ, ವಚನಕಾರ್ತಿಯರ ಸಾಹಿತ್ಯದಲ್ಲಿರುವ ವೈಚಾರಿಕತೆ, ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.
ಕೃತಿ ಬಿಡುಗಡೆ ಸಮಾರಂಭದಲ್ಲಿ ಶಕುಂತಲಾ ತಟ್ಟಿ, ಕುಸುಮಾ ಮಲ್ಲಾಡದ, ನೀಲಕ್ಕ ಬೂದಿಹಾಳ, ಕಾಂಚನಮಾಲಾ ಹಸರೆಡ್ಡಿ, ಲತಾ ಎಸ್. ತಟ್ಟಿ, ಅರುಂಧತಿ ಬಿಂಕದಕಟ್ಟಿ, ನಿರ್ಮಲಾ ಅರಳಿ, ಶಾಂತಾ ಗುಳಗಣ್ಣವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಚನಗಳ ವೈಚಾರಿಕ ಪರಂಪರೆ, ಮಹಿಳಾ ಸಮಾನತೆಯ ಆಶಯ ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳ ಕುರಿತು ಚಿಂತನ-ಮಂಥನ ನಡೆಯಿತು. ವಚನಕಾರ್ತಿಯರ ವಿಚಾರಧಾರೆ ಇಂದಿನ ಸಮಾಜದಲ್ಲಿ ಮತ್ತಷ್ಟು ಪ್ರಸ್ತುತವಾಗಿದ್ದು, ಅವರ ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ಗಣ್ಯರು ಪ್ರತಿಪಾದಿಸಿದರು.
ಪೂಜ್ಯ ಶ್ರೀ ಸಿದ್ದೇಶ್ವರ ಸತ್ಸಂಗ ಬಳಗ, ಗದಗ ಜಿಲ್ಲಾ ಹಾಗೂ ಲಕ್ಷ್ಮೇಶ್ವರ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ರಾಜ-ರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಅಕ್ಕಮಹಾದೇವಿ ಬಳಗ, ಪ್ರೇಮಕ್ಕಾ ಅಭಿಮಾನ ಬಳಗ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.
ಮಹಿಳಾ ಸಾಹಿತ್ಯವನ್ನು ಕೇವಲ ಮಹಿಳೆಯರ ಸಾಹಿತ್ಯವೆಂದು ಸೀಮಿತಗೊಳಿಸದೆ, ಅದು ಸಮಾಜದ ಸಮಗ್ರ ಚಿಂತನೆಯ ಭಾಗ ಎಂಬ ಅರಿವು ಮೂಡಿಸಬೇಕು.
— ಪ್ರತಿಮಾ ಮಹಾಜನಶೆಟ್ಟರ



