ವಿಜಯಸಾಕ್ಷಿ ಸುದ್ದಿ, ಗದಗ: ಹಲವು ಸುತ್ತಿನ ಕಸರತ್ತು, ಚರ್ಚೆಗಳ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಹೊಸ ಸಂಪುಟದಲ್ಲಿ ಭ್ರಷ್ಟಾಚಾರ ಹಾಗೂ ಅಸಮರ್ಥತೆಯ ಆರೋಪ ಎದುರಿಸುತ್ತಿರುವವರಿಗೇ ಮಣೆ ಹಾಕಲಾಗಿದೆ ಎಂದು ಬಿಜೆಪಿ ಮುಖಂಡ ಹಾಗೂ ಉದ್ಯಮಿದಾರ ವಿಜಯಕುಮಾರ ಗಡ್ಡಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಾಲ್ಮೀಕಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ₹187 ಕೋಟಿ ಅಕ್ರಮದ ಆರೋಪ ಎದುರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಂಡಿರುವುದು ಕಾಂಗ್ರೆಸ್ ಸರ್ಕಾರದ ನಾಚಿಕೆಗೇಡಿತನಕ್ಕೆ ಸಾಕ್ಷಿ ಎಂದು ಟೀಕಿಸಿದ್ದಾರೆ.
“ಇಡೀ ರಾಜ್ಯದ ಜನರು ಛೀಮಾರಿ ಹಾಕಿದರೂ ಆರೋಪ ಎದುರಿಸುತ್ತಿರುವವರನ್ನೇ ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವುದು ಕಾಂಗ್ರೆಸ್ ಸರ್ಕಾರದ ನಡೆ ಎಷ್ಟು ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ.”
— ವಿಜಯಕುಮಾರ ಗಡ್ಡಿ, ಬಿಜೆಪಿ ಮುಖಂಡ ಹಾಗೂ ಉದ್ಯಮಿದಾರ
ಕಾರ್ಮಿಕ ಇಲಾಖೆಯ ಕಲ್ಯಾಣ ನಿಧಿ ದುರುಪಯೋಗ ಹಾಗೂ ಹೆಲ್ತ್ ಕಿಟ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿಬಂದಿದ್ದರೂ ಸಂತೋಷ್ ಲಾಡ್ ಅವರನ್ನು ಮತ್ತೆ ಕಾರ್ಮಿಕ ಸಚಿವರನ್ನಾಗಿ ನೇಮಕ ಮಾಡಿರುವುದು ರಾಜ್ಯದ ಜನರ ದೌರ್ಭಾಗ್ಯ ಎಂದು ಅವರು ಟೀಕಿಸಿದ್ದಾರೆ.
ದುಡ್ಡು ನೀಡಿದವರಿಗೆ ಮಾತ್ರ ಮನೆ ಎಂಬ ರೀತಿಯಲ್ಲಿ ‘ಮನಿ ಇದ್ದರೆ ಮಾತ್ರ ಮನೆ’ ಎಂಬ ಆರೋಪಕ್ಕೆ ಗುರಿಯಾಗಿದ್ದ ಜಮೀರ್ ಅಹ್ಮದ್ ಖಾನ್ ಅವರಿಗೆ ಮತ್ತೆ ವಸತಿ ಖಾತೆ ನೀಡಿರುವುದನ್ನು ಪ್ರಶ್ನಿಸಿರುವ ಗಡ್ಡಿ, ಇದರಿಂದ ಕಾಂಗ್ರೆಸ್ ಸರ್ಕಾರಕ್ಕೆ ಆತ್ಮಗೌರವವೇ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪೂರ್ವಭಾವಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಕಾರ್ಯವೈಖರಿ ಕುರಿತು ಟೀಕೆಗಳು ಕೇಳಿಬಂದಿದ್ದರೂ ಎಸ್.ಎಸ್. ಮಧು ಬಂಗಾರಪ್ಪ ಅವರಿಗೆ ಮತ್ತೆ ಶಿಕ್ಷಣ ಖಾತೆ ನೀಡಿರುವುದು ರಾಜ್ಯದ ಸುಶಿಕ್ಷಿತರಿಗೆ ತಲೆತಗ್ಗಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತ ಹಾಗೂ ಸಚಿವ ಸಂಪುಟದ ಬೆಳವಣಿಗೆಗಳನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಈ ಸರ್ಕಾರವನ್ನು ಕಿತ್ತೊಗೆಯಲು ಜನರು ಉತ್ಸುಕರಾಗಿದ್ದಾರೆ ಎಂದು ವಿಜಯಕುಮಾರ ಗಡ್ಡಿ ತಿಳಿಸಿದ್ದಾರೆ.



