HomeGadag Newsಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಬೆವರಿನ ಕುರುಹು ವಿಜಯ ಕಲಾ ಮಂದಿರ

ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಬೆವರಿನ ಕುರುಹು ವಿಜಯ ಕಲಾ ಮಂದಿರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಕಲೆ ಎಂದರೆ ಕೇವಲ ಭಾವನೆಗಳ ಅಭಿವ್ಯಕ್ತಿಯಲ್ಲ; ಅದು ಸೃಜನಶೀಲ ತಪಸ್ಸು. ಮಾನವನಲ್ಲಿ ಮಾನವೀಯ ಮೌಲ್ಯ, ಆತ್ಮಸ್ಥೈರ್ಯ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬೆಳೆಸುವ ಶಕ್ತಿ ಕಲೆಗೆ ಇದೆ. ಇಂತಹ ಕಲೆಯನ್ನೇ ಬದುಕಿನ ಉಸಿರಾಗಿಸಿಕೊಂಡು, ಹಲವು ಕಷ್ಟ-ಸವಾಲುಗಳನ್ನು ಎದುರಿಸಿ ಕಲಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದವರು ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರು.

ಸ್ವಾತಂತ್ರ್ಯೋತ್ತರ ಅವಧಿಯಲ್ಲಿ ವಿಜಯ ಕಲಾ ಮಂದಿರ ಸಂಸ್ಥೆಯನ್ನು ಸ್ಥಾಪಿಸಿ, ನೂರಾರು ಕಲಾ ವಿದ್ಯಾರ್ಥಿಗಳಿಗೆ ದಾರಿದೀಪವಾದ ಟಿ.ಪಿ. ಅಕ್ಕಿಯವರ ಕಲಾ ಸೇವೆಯ ಕುರುಹುಗಳು ಇಂದಿಗೂ ವಿಜಯ ಕಲಾ ಮಂದಿರದಲ್ಲಿ ಜೀವಂತವಾಗಿವೆ. ಕಲೆಯನ್ನು ಉಳಿಸಿ ಬೆಳೆಸುವುದರ ಜತೆಗೆ ಕಲಾವಿದರನ್ನು ರೂಪಿಸುವ ಮಹತ್ವದ ಕಾರ್ಯವನ್ನು ಅವರು ಕೈಗೊಂಡಿದ್ದರು. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರೊಂದಿಗೆ ಸಂಪರ್ಕ ಬೆಳೆಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಲಾ ಶಿಕ್ಷಣ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇಂದಿನ ಉದ್ಯೋಗಕೇಂದ್ರಿತ ಶಿಕ್ಷಣದ ನಡುವೆ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಬೆಳೆಸುವುದು ಸವಾಲಿನ ಕೆಲಸ. ಅದರಲ್ಲೂ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ತಂತ್ರಜ್ಞಾನದ ವೇಗದ ಬೆಳವಣಿಗೆಯ ನಡುವೆಯೂ ಕಲೆಯ ಮಹತ್ವ ಕುಗ್ಗಿಲ್ಲ. ಮಾನವನ ಭಾವನೆ, ಅನುಭವ ಹಾಗೂ ಸೃಜನಶೀಲತೆಯಿಂದ ಹುಟ್ಟುವ ಕಲಾಕೃತಿಗೆ ತನ್ನದೇ ಆದ ಜೀವಂತಿಕೆ ಇದೆ. ಹೀಗಾಗಿ ಕಲಾವಿದರನ್ನು ರೂಪಿಸುವ ಕಾರ್ಯ ನಾಡಿನ ಸಾಂಸ್ಕೃತಿಕ ಆಸ್ತಿಯನ್ನು ಉಳಿಸುವ ಕೆಲಸವಾಗಿದೆ.

ಪ್ರಸ್ತುತ ಪ್ರಾ. ವಸಂತ ಅಕ್ಕಿ, ಪ್ರೊ. ಅಶೋಕ, ಶ್ರೀಮತಿ ಶಾರದಾ ಅಕ್ಕಿ ಹಾಗೂ ಪ್ರಕಾಶ ಅಕ್ಕಿ ಅವರ ಶ್ರಮದಿಂದ ವಿಜಯ ಕಲಾ ಮಂದಿರ ತನ್ನ ಕಲಾ ಪರಂಪರೆಯನ್ನು ಮುಂದುವರಿಸುತ್ತಿದೆ. ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ ಅಕ್ಕಿ ಅವರ ಶಿಸ್ತು, ಸರಳತೆ ಹಾಗೂ ಸಮಾಜಮುಖಿ ಚಟುವಟಿಕೆಗಳು ಗಮನ ಸೆಳೆಯುತ್ತವೆ. ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಹೆಸರಿನ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸುವ ಮೂಲಕ ಕಲಾಸಕ್ತರಿಗೆ ಸುಂದರ ವಾತಾವರಣ ಕಲ್ಪಿಸಲಾಗಿದೆ.

ಇದೇ ಗ್ಯಾಲರಿಯಲ್ಲಿ ವಿಜಯ ಕಲಾ ಮಂದಿರ ಚಿತ್ರಕಲಾ ಮಹಾವಿದ್ಯಾಲಯದ ಬಿ.ವಿ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳ ಸಮೂಹ ಚಿತ್ರಕಲಾ ಪ್ರದರ್ಶನ ಹಾಗೂ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಅನ್ನಪೂರ್ಣ ಮಡ್ಡಿ, ಬಸವರಾಜ ಅಕ್ಕಿ, ವಿನಾಯಕ ಪಾಟೀಲ, ನಿವೇದಿತಾ ಪಟ್ಟೇದ ಹಾಗೂ ಶಂಕರ ಮುಡಿಯಜ್ಜನವರ ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಅನ್ನಪೂರ್ಣ ಮಡ್ಡಿಯವರ ಮೈಸೂರ ಶೈಲಿಯ ಗೋಲ್ಡಲೀಫ್ ಸಾಂಪ್ರದಾಯಿಕ ಕಲಾಕೃತಿಗಳು, ಯಕ್ಷಗಾನದ ರಚನೆಗಳು, ಲಕ್ಷ್ಮೇಶ್ವರದ ಸೋಮೇಶ್ವರ ಮೂರ್ತಿ ಹಾಗೂ ಗಣೇಶನ ಚಿತ್ರಗಳು ಗಮನ ಸೆಳೆಯುತ್ತವೆ. ವಿನಾಯಕ ಪಾಟೀಲರ ‘ಮೀನು ಮತ್ತು ಗಾಳ’ ಕಲಾಕೃತಿಯಲ್ಲಿ ಪೋಸ್ಟ್ ಇಂಪ್ರೆಷನಿಸಂನ ಪ್ರಭಾವ ಕಂಡುಬರುತ್ತದೆ. ಶಿವಶಂಕರರ ‘ರೈತ’ ಕಲಾಕೃತಿ ರೈತನ ಬದುಕು, ಶ್ರಮ ಹಾಗೂ ಚೈತನ್ಯವನ್ನು ಬಿಂಬಿಸುತ್ತದೆ. ಸಾಂಪ್ರದಾಯಿಕ, ನವ್ಯ, ನೈಜ, ನಿಸರ್ಗ ಹಾಗೂ ಸಂಯೋಜನಾ ಶೈಲಿಯ ಹಲವು ಕಲಾಕೃತಿಗಳು ಪ್ರದರ್ಶನದಲ್ಲಿವೆ.

ಕಾರ್ಯಕ್ರಮವನ್ನು ಡಾ. ಸಿ.ಟಿ. ಗುರುಪ್ರಸಾದ, ಕುಲಸಚಿವರು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ ಉದ್ಘಾಟಿಸಲಿದ್ದಾರೆ. ಮಂಜುನಾಥ ಬಿ. ಅಬ್ಬಿಗೇರಿ, ಎಸ್.ಎಚ್. ಶಿವನಗೌಡರ ಹಾಗೂ ಶ್ರೀಮತಿ ಶಾರದಾ ವಿ. ಅಕ್ಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಹಜಾನ ಮುದಕವಿ ಹಾಗೂ ಪ್ರೊ. ಎಸ್. ಗುಂಜಾಳ ಅವರನ್ನು ಸನ್ಮಾನಿಸಲಾಗುವುದು.

ಕಲಾ ಮಹರ್ಷಿ ಟಿ.ಪಿ. ಅಕ್ಕಿಯವರ ಬೆವರಿನಿಂದ ಬೆಳೆದ ವಿಜಯ ಕಲಾ ಮಂದಿರ ಇಂದು ಹೊಸ ತಲೆಮಾರಿನ ಕಲಾವಿದರಿಗೆ ಆಶಾಕಿರಣವಾಗಿದೆ. ಎಐ ಯುಗದಲ್ಲೂ ಮಾನವ ಸೃಜನಶೀಲತೆಯ ಶಕ್ತಿ ಅಜೇಯವಾಗಿದ್ದು, ಕಲೆಯನ್ನು ಉಳಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬ ಕಲಾಸಕ್ತನ ಮೇಲಿದೆ.

ಬಸವರಾಜ ನೆಲಜೇರಿ, ಗದಗ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img