ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಸ್ವೀಕರಿಸುವ ಪರಿಪಾಠ ಹಿಂದಿನ ದಿನಗಳಲ್ಲಿತ್ತು. ಆದರೆ ಇಂದು ತಪ್ಪಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಬದಲಾಗಿರುವ ರಾಜಕೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪುತ್ರ ಅನಿಲ್ ಲಾಲ್ ಬಹದ್ದೂರ್ ಶಾಸ್ತ್ರಿ ವಿಷಾದಿಸಿದರು.
ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಸಭಾಂಗಣದಲ್ಲಿ ಶನಿವಾರ ಎಚ್.ಕೆ. ಪಾಟೀಲ ಸೇವಾ ತಂಡ ಆಯೋಜಿಸಿದ್ದ ‘ನಿಮ್ಮ ಸೇವೆಗೆ ಅವಕಾಶ ಕೊಡಿ’ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ತಮ್ಮ ತಂದೆ ಲಾಲ್ ಬಹದ್ದೂರ್ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ರೈಲು ಅಪಘಾತ ಸಂಭವಿಸಿದಾಗ, ರೈಲನ್ನು ತಾವು ಚಲಾಯಿಸದಿದ್ದರೂ ಸಚಿವರಾಗಿ ಘಟನೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆಗ ರಾಜೀನಾಮೆಗಾಗಿ ಯಾರೂ ಪ್ರತಿಭಟನೆ ನಡೆಸಬೇಕಾದ ಅಗತ್ಯವಿರಲಿಲ್ಲ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅದಕ್ಕಾಗಿ ವಿದ್ಯಾರ್ಥಿಗಳು ಬೀದಿಗಿಳಿಯಬೇಕಾದ ಸ್ಥಿತಿ ಬಂದಿದೆ ಎಂದರು.
ಹೇಳುವುದಕ್ಕೂ ಮಾಡುವುದಕ್ಕೂ ಇರುವ ಅಂತರ ಇಂದಿನ ವ್ಯವಸ್ಥೆಯಲ್ಲಿ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನರಿಗೆ ವಿದೇಶ ಪ್ರವಾಸ ಮಾಡದಂತೆ ಕರೆ ನೀಡಿದರೂ ತಾವೇ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಮಾತು ಮತ್ತು ಕೃತ್ಯಗಳ ನಡುವೆ ಹೊಂದಾಣಿಕೆ ಇರಬೇಕು ಎಂದು ಅವರು ಹೇಳಿದರು.
ಎಚ್.ಕೆ. ಪಾಟೀಲ ಸೇವಾ ತಂಡವು 11 ಸಾವಿರ ಕುಟುಂಬಗಳನ್ನು ದತ್ತು ಪಡೆದು, 23ಕ್ಕೂ ಹೆಚ್ಚು ಜನಪರ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿರುವುದು ದೇಶದಲ್ಲೇ ಅಪರೂಪದ ಸಾಮಾಜಿಕ ಸೇವಾ ಕಾರ್ಯ ಎಂದು ಅನಿಲ್ ಶಾಸ್ತ್ರಿ ಶ್ಲಾಘಿಸಿದರು.
ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಜನರಿಂದ ದೂರವಾಗುವವರ ನಡುವೆ ಎಚ್.ಕೆ. ಪಾಟೀಲ ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿದ್ದು, ಅವರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವುದು ಮಾದರಿಯಾಗಿದೆ. ಕಳೆದ 20 ವರ್ಷಗಳಿಂದ ಎಚ್.ಕೆ. ಪಾಟೀಲ ಅವರ ಜನಸೇವೆಯನ್ನು ಗಮನಿಸುತ್ತಿದ್ದು, ಅವರ ಬದ್ಧತೆ, ಪ್ರಾಮಾಣಿಕತೆ ಹಾಗೂ ಸಮರ್ಪಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದರು.
ಕೆ.ಎಚ್. ಪಾಟೀಲ ಅವರು ಹಾಕಿಕೊಟ್ಟ ಜನಸೇವೆ ಮತ್ತು ಅಭಿವೃದ್ಧಿಯ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ. 73ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಎಚ್.ಕೆ. ಪಾಟೀಲ ಅವರಿಗೆ ಶುಭಾಶಯ ಕೋರಿದ ಅವರು, ಗದಗ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಸೇವೆಗೆ 577 ಕ್ಯಾಪ್ಟನ್‌ಗಳ ಪಡೆ
ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ ಮಾತನಾಡಿ, ಗದಗ ಜಿಲ್ಲೆಯನ್ನು ಅಂಗಾಂಗ ದಾನ ನೋಂದಣಿಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ತಂಡ ಕಾರ್ಯನಿರ್ವಹಿಸುತ್ತಿದೆ ಎಂದರು.
ಅಂಗಾಂಗ ದಾನ ನೋಂದಣಿಯಲ್ಲಿ ಹಿಂದೆ ಗದಗ ಜಿಲ್ಲೆ 21ನೇ ಸ್ಥಾನದಲ್ಲಿತ್ತು. ಸೇವಾ ತಂಡದ ಸಂಘಟಿತ ಪ್ರಯತ್ನದಿಂದ ಇದೀಗ ಮೂರನೇ ಸ್ಥಾನಕ್ಕೆ ಏರಿದೆ. ಅಕ್ಟೋಬರ್ 2ರ ವೇಳೆಗೆ ರಾಜ್ಯದಲ್ಲೇ ಪ್ರಥಮ ಸ್ಥಾನಕ್ಕೇರಿಸುವ ಗುರಿ ಹೊಂದಿದ್ದು, ಅದಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
ಸೇವಾ ತಂಡದಿಂದ ಒಟ್ಟು 11 ಸಾವಿರ ಮನೆಗಳನ್ನು ದತ್ತು ಪಡೆಯಲಾಗಿದೆ. ತಂಡದಲ್ಲಿ 577 ಕ್ಯಾಪ್ಟನ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ 283 ಕ್ಯಾಪ್ಟನ್‌ಗಳಿಗೆ ತಲಾ 50 ಮನೆಗಳ ಜವಾಬ್ದಾರಿ ವಹಿಸಲಾಗಿದೆ. ಅಗತ್ಯವಿರುವ ಕುಟುಂಬಗಳಿಗೆ 23ಕ್ಕೂ ಹೆಚ್ಚು ಸೇವೆಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸಲು ತಂಡ ಸಜ್ಜಾಗಿದೆ ಎಂದರು.
ಸೇವಾ ಕಾರ್ಯಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ನೂತನ ವೆಬ್‌ಸೈಟ್ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.
ಜನಸೇವೆಯೇ ತಂಡದ ಗುರಿ
ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ಸೇವಾ ತಂಡದ ಯಶಸ್ಸು ಕ್ಯಾಪ್ಟನ್‌ಗಳ ಕಲ್ಪನೆ, ಬದ್ಧತೆ ಹಾಗೂ ಕಾರ್ಯನಿರ್ವಹಣೆಯ ಮೇಲೆ ಅವಲಂಬಿತವಾಗಿದೆ. ನಾವೆಲ್ಲರೂ ರಾಜಕೀಯ ಕಾರ್ಯಕರ್ತರು ಎಂಬುದನ್ನು ಅರಿತುಕೊಂಡು ನಾಯಕರನ್ನು ಬಲಪಡಿಸುವ ಮೂಲಕ ಜನಸೇವೆ ಮಾಡಲು ಸಿದ್ಧರಾಗಬೇಕು ಎಂದರು.
ಸೇವೆ ಮಾಡಬೇಕೆಂಬ ಮನೋಭಾವ ಹೊಂದಿರುವವರು ತಂಡದೊಂದಿಗೆ ಇದ್ದಾರೆ. ಸೇವೆಯ ಅಗತ್ಯವಿರುವವರು ನಮ್ಮ ನಡುವೆ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಂತಹವರ ನೆರವಿಗೆ ಸೇವಾ ತಂಡ ಸದಾ ಸಿದ್ಧವಿದೆ. ಕೊರೊನಾ ಸಂದರ್ಭದಲ್ಲಿ ನಿರಂತರವಾಗಿ ಜನಪರ ಕಾರ್ಯಗಳನ್ನು ಕೈಗೊಂಡಿದ್ದು, ಮುಂದೆಯೂ ಸೇವಾ ಕಾರ್ಯವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಎಚ್. ಪಾಟೀಲ ಅವರು ಸೇವಾ ತಂಡದಿಂದ ಲಭ್ಯವಿರುವ 23 ಸೇವೆಗಳ ವಿವರ ಹಾಗೂ ವೆಬ್‌ಸೈಟ್ ಕಾರ್ಯವೈಖರಿಯನ್ನು ಪರಿಚಯಿಸಿದರು. ಶಾಸಕ ಎಚ್.ಕೆ. ಪಾಟೀಲ ಅವರು ಸೇವಾ ತಂಡದ ಕ್ಯಾಪ್ಟನ್‌ಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಅನಿಲ್ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸೇವಾ ತಂಡದ ವತಿಯಿಂದ ನಂದಿ ವಿಗ್ರಹ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎಚ್. ಕೋನರೆಡ್ಡಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಎ.ಎಂ. ಹಿಂಡಸಗೇರಿ, ವಾಸಣ್ಣ ಕುರುಡಗಿ, ನೀಲಮ್ಮ ಬೋಳನವರ, ಸಿದ್ಧಲಿಂಗೇಶ್ವರ ಪಾಟೀಲ, ಬಸವರಾಜ ಕಡೇಮನಿ, ಗುರಣ್ಣ ಬಳಗಾನೂರ, ಬಸವರಾಜ ಸುಂಕಾಪುರ, ಅಕ್ಬರಸಾಬ ಬಬರ್ಚಿ, ಕೊಟ್ರೇಶಪ್ಪ ಬಸೆಗಣ್ಣಿ, ಎಂ.ಸಿ. ಶೇಖ್, ಬರ್ಕತಲಿ ಮುಲ್ಲಾ, ಆನಂದಯ್ಯಸ್ವಾಮಿ ಗಡ್ಡದೇವರಮಠ ಸೇರಿದಂತೆ ಹಲವು ಮುಖಂಡರು, ಸೇವಾ ತಂಡದ ಕ್ಯಾಪ್ಟನ್‌ಗಳು ಹಾಗೂ ಕೋಆರ್ಡಿನೇಟರ್‌ಗಳು ಉಪಸ್ಥಿತರಿದ್ದರು.
ಬಿ.ಬಿ. ಅಸೂಟಿ ಸ್ವಾಗತಿಸಿದರು.
ಕೋಟ್
“ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈಲ್ವೆ ಸಚಿವರಾಗಿದ್ದಾಗ ನಡೆದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ರೈಲನ್ನು ಅವರು ಚಲಾಯಿಸಿರಲಿಲ್ಲ. ಆದರೂ ಸಚಿವರಾಗಿ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆಗ ಯಾರೂ ಪ್ರತಿಭಟನೆ ಮಾಡಬೇಕಾಗಿರಲಿಲ್ಲ. ಆದರೆ ಇಂದು ರಾಜೀನಾಮೆಗಾಗಿ ವಿದ್ಯಾರ್ಥಿಗಳು ಬೀದಿಗಿಳಿಯಬೇಕಾದ ಪರಿಸ್ಥಿತಿ ಬಂದಿದೆ. ಇದು ಬದಲಾಗಿರುವ ರಾಜಕೀಯ ಸಂಸ್ಕೃತಿಗೆ ಉದಾಹರಣೆ.”
— ಅನಿಲ್ ಲಾಲ್ ಬಹದ್ದೂರ್ ಶಾಸ್ತ್ರಿ
ಕೋಟ್
“ಅಂಗಾಂಗ ದಾನ ನೋಂದಣಿಯಲ್ಲಿ ಗದಗ ಜಿಲ್ಲೆ ಹಿಂದೆ 21ನೇ ಸ್ಥಾನದಲ್ಲಿತ್ತು. ಸೇವಾ ತಂಡದ ಸಂಘಟಿತ ಪ್ರಯತ್ನದಿಂದ ಇದೀಗ ಮೂರನೇ ಸ್ಥಾನಕ್ಕೆ ಬಂದಿದೆ. ಅಕ್ಟೋಬರ್ 2ರ ವೇಳೆಗೆ ರಾಜ್ಯದಲ್ಲೇ ಮೊದಲ ಸ್ಥಾನಕ್ಕೇರುವ ಗುರಿ ಹೊಂದಿದ್ದು, ಅದಕ್ಕಾಗಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ.”
— ಪ್ರಭು ಬುರಬುರೆ, ಅಧ್ಯಕ್ಷರು, ಎಚ್.ಕೆ. ಪಾಟೀಲ ಸೇವಾ ತಂಡ



