HomeCrime Newsಗದಗ ಪೊಲೀಸರ ಭರ್ಜರಿ ಬೇಟೆ: ₹4.80 ಕೋಟಿ ಮೌಲ್ಯದ ಸ್ವತ್ತು ಪತ್ತೆ, ₹3.68 ಕೋಟಿ ಮೌಲ್ಯದ...

ಗದಗ ಪೊಲೀಸರ ಭರ್ಜರಿ ಬೇಟೆ: ₹4.80 ಕೋಟಿ ಮೌಲ್ಯದ ಸ್ವತ್ತು ಪತ್ತೆ, ₹3.68 ಕೋಟಿ ಮೌಲ್ಯದ ವಸ್ತು ವಶ

For Dai;y Updates Join Our whatsapp Group

ಗದಗ: ಕತ್ತಲಲ್ಲಿ ಮನೆಗೆ ಕನ್ನ ಹಾಕಿದ ಕಳ್ಳರು… ನಂಬಿಸಿ ಹಣ ಎಗರಿಸಿದ ವಂಚಕರು… ಕಣ್ಮರೆಯಾದ ಮೊಬೈಲ್‌ಗಳು… ಕಳ್ಳತನವಾದ ವಾಹನಗಳು… ಹೀಗೆ ಜನರ ಕೈತಪ್ಪಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಬೆನ್ನತ್ತಿದ ಗದಗ ಜಿಲ್ಲಾ ಪೊಲೀಸರು, ಒಂದು ವರ್ಷದ ಅವಧಿಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಜಾಡು ಹಿಡಿದಿದ್ದಾರೆ. ಕಳ್ಳರ ಕೈ ಸೇರಿದ್ದ ಚಿನ್ನ–ಬೆಳ್ಳಿ, ನಗದು, ವಾಹನ ಹಾಗೂ ಮೊಬೈಲ್‌ಗಳನ್ನು ಪತ್ತೆಹಚ್ಚಿ ಮತ್ತೆ ವಾರಸುದಾರರ ಕೈಗೆ ಒಪ್ಪಿಸಿದ್ದಾರೆ.

2025ರ ಆಗಸ್ಟ್‌ 1ರಿಂದ 2026ರ ಜುಲೈ 31ರವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ನಡೆದ ಕಳವು, ಮೋಸ–ವಂಚನೆ ಹಾಗೂ ಮೊಬೈಲ್ ಕಳವು ಪ್ರಕರಣಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ₹4,80,46,501 ಮೌಲ್ಯದ ಸ್ವತ್ತು ಪತ್ತೆಯಾಗಿದ್ದು, ₹3,68,48,989 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಸ್ವತ್ತುಗಳನ್ನು ವಾರಸುದಾರರು ಹಾಗೂ ಫಿರ್ಯಾದಿದಾರರಿಗೆ ಹಸ್ತಾಂತರಿಸುವ ‘ಪ್ರಾಪರ್ಟಿ ರಿಟರ್ನ್ ಪರೇಡ್‌’ ಅನ್ನು ಸೋಮವಾರ ಗದಗ ಜಿಲ್ಲಾ ಪೊಲೀಸ್ ಭವನದಲ್ಲಿ ಆಯೋಜಿಸಲಾಗಿತ್ತು.

ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ್ ಪಾಟೀಲ ಅವರ ಸಮ್ಮುಖದಲ್ಲಿ ಹಾಗೂ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ತೆಯಾದ ಸ್ವತ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಚಿನ್ನ ಕಳವು ಪ್ರಕರಣಗಳಲ್ಲಿ ಒಟ್ಟು 68 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 51 ಪ್ರಕರಣಗಳನ್ನು ಪತ್ತೆಹಚ್ಚಿ 95 ಆರೋಪಿಗಳನ್ನು ಬಂಧಿಸಲಾಗಿದೆ. ಕಳವಾಗಿದ್ದ 2,785.23 ಗ್ರಾಂ ಚಿನ್ನದ ಪೈಕಿ 1,736.69 ಗ್ರಾಂ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳವಾಗಿದ್ದ ಚಿನ್ನದ ಒಟ್ಟು ಮೌಲ್ಯ ₹2.30 ಕೋಟಿಗೂ ಅಧಿಕವಾಗಿದ್ದು, ಪತ್ತೆಯಾದ ಚಿನ್ನದ ಮೌಲ್ಯ ₹1,65,63,977 ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಇನ್ನು ಕಳ್ಳರ ಕಣ್ಣು ಬೆಳ್ಳಿಯ ಮೇಲೂ ಬಿದ್ದಿತ್ತು. ಒಟ್ಟು 55,850.02 ಗ್ರಾಂ ಬೆಳ್ಳಿ ಕಳವಾಗಿದ್ದು, ಅದರಲ್ಲಿ 37,191.39 ಗ್ರಾಂ ಬೆಳ್ಳಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ವಶಪಡಿಸಿಕೊಂಡ ಬೆಳ್ಳಿ ಆಭರಣಗಳ ಅಂದಾಜು ಮೌಲ್ಯ ₹60,52,877.

ನಗದು ಕಳವು ಪ್ರಕರಣಗಳಲ್ಲೂ ಪೊಲೀಸರು ಆರೋಪಿಗಳ ಜಾಡು ಹಿಡಿದಿದ್ದಾರೆ. ಕಳವಾಗಿದ್ದ ₹27,31,000 ನಗದಿನ ಪೈಕಿ ₹7,98,615 ಹಣವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.

ಬೈಕ್‌, ಕಾರು ಸೇರಿದಂತೆ ವಾಹನಗಳನ್ನು ಕಳವು ಮಾಡುತ್ತಿದ್ದವರ ಮೇಲೂ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಒಟ್ಟು 36 ವಾಹನ ಕಳವು ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 23 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 16 ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, 40 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ವಾಹನಗಳ ಅಂದಾಜು ಮೌಲ್ಯ ₹17.13 ಲಕ್ಷ ಎಂದು ತಿಳಿಸಲಾಗಿದೆ.

ಮೋಸ–ವಂಚನೆ ಪ್ರಕರಣಗಳಲ್ಲೂ ಪೊಲೀಸರು ಆರೋಪಿಗಳ ಜಾಡು ಹಿಡಿದಿದ್ದಾರೆ. ಒಟ್ಟು 32 ಪ್ರಕರಣಗಳು ದಾಖಲಾಗಿದ್ದು, 27 ಪ್ರಕರಣಗಳನ್ನು ಪತ್ತೆಹಚ್ಚಿ 35 ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹1.22 ಕೋಟಿಗೂ ಅಧಿಕ ಮೌಲ್ಯದ ಹಣ ಹಾಗೂ ಸ್ವತ್ತಿನ ವಂಚನೆ ನಡೆದಿದ್ದು, ಅದರಲ್ಲಿ ₹37,13,942 ಮೌಲ್ಯದ ಸ್ವತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೊಬೈಲ್ ಕಳವು ಹಾಗೂ ಕಳೆದುಹೋದ ಮೊಬೈಲ್‌ಗಳ ಪತ್ತೆಗೂ ಪೊಲೀಸರು ತಂತ್ರಜ್ಞಾನದ ನೆರವು ಪಡೆದಿದ್ದಾರೆ. CEIR (Central Equipment Identity Register) ವ್ಯವಸ್ಥೆ ಬಳಸಿಕೊಂಡು ಮೊಬೈಲ್‌ಗಳ ಜಾಡು ಪತ್ತೆಹಚ್ಚಲಾಗಿದೆ. ಒಟ್ಟು 1,440 ಮೊಬೈಲ್ ಪ್ರಕರಣಗಳಲ್ಲಿ 965 ಮೊಬೈಲ್‌ಗಳನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ. ಪತ್ತೆಯಾದ ಮೊಬೈಲ್‌ಗಳ ಒಟ್ಟು ಮೌಲ್ಯ ₹97,19,578 ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಒಂದು ವರ್ಷದ ಅವಧಿಯಲ್ಲಿ ನಡೆದ ಈ ಕಾರ್ಯಾಚರಣೆಯ ಅಂಕಿ-ಅಂಶಗಳು ಗಮನ ಸೆಳೆಯುವಂತಿವೆ. ಕಳವು, ಮೋಸ–ವಂಚನೆ ಹಾಗೂ ಮೊಬೈಲ್ ಪತ್ತೆ ಕಾರ್ಯಾಚರಣೆಗಳಲ್ಲಿ ಪೊಲೀಸರು ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಪತ್ತೆಹಚ್ಚಿದ್ದಾರೆ. ಕಳ್ಳರ ಕೈ ಸೇರಿದ್ದ ಚಿನ್ನ–ಬೆಳ್ಳಿ, ಕಳವಾದ ನಗದು, ವಾಹನಗಳು ಹಾಗೂ ಕಳೆದುಹೋದ ಮೊಬೈಲ್‌ಗಳು ಮತ್ತೆ ವಾರಸುದಾರರ ಕೈ ಸೇರಿವೆ.

ನಿರಂತರ ತನಿಖೆ, ತಾಂತ್ರಿಕ ನೆರವು ಹಾಗೂ ಪರಿಣಾಮಕಾರಿ ಕಾರ್ಯಾಚರಣೆಯ ಮೂಲಕ ಕಳವು ಮತ್ತು ವಂಚನೆ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಗದಗ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಮುರ್ತುಜಾ ಖಾದ್ರಿ, ಸಜ್ಜನ, ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಇದ್ದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img