ದಾವಣಗೆರೆ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿರುವ ಆರೋಪ ಕೇಳಿಬಂದಿದೆ.
ದಾವಣಗೆರೆ ತಾಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪಾಮೇನಹಳ್ಳಿ ಗ್ರಾಮದ ರಘು (36) ಕೊಲೆಯಾದ ವ್ಯಕ್ತಿ. ಆತನ ಪತ್ನಿ ಶೃತಿ, ಆಕೆಯ ಪ್ರಿಯಕರ ಉಬೇದುಲ್ಲಾ ಹಾಗೂ ಮೃತದೇಹ ಸಾಗಿಸಲು ಸಹಕರಿಸಿದ ಆರೋಪದ ಮೇಲೆ ಸುರೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ರಘು ಹಾಗೂ ಶೃತಿ ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದರು. ರಘುವಿಗೆ ಕುಡಿತದ ಚಟವಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಈ ನಡುವೆ ಕಳೆದ 2-3 ವರ್ಷಗಳಿಂದ ಶೃತಿ ಹಾಗೂ ಉಬೇದುಲ್ಲಾ ನಡುವೆ ಅಕ್ರಮ ಸಂಬಂಧವಿತ್ತು ಎನ್ನಲಾಗಿದೆ. ಪತಿಯೊಂದಿಗೆ ಸಂಸಾರ ನಡೆಸಲು ರಘು ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಶೃತಿ, ಪ್ರಿಯಕರ ಉಬೇದುಲ್ಲಾ ಜೊತೆ ಸೇರಿ ರಘುವನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಳೆ ಎನ್ನಲಾಗಿದೆ.
ಯೋಜನೆಯಂತೆ ರಘುವಿನ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಉಬೇದುಲ್ಲಾ ಹಾಗೂ ಆತನ ಸ್ನೇಹಿತ ಸುರೇಶ್ ಸೇರಿಕೊಂಡು ರಘುವಿನ ಮೃತದೇಹವನ್ನು ತುಂಗಭದ್ರಾ ನದಿಗೆ ಎಸೆದಿದ್ದಾರೆ ಎನ್ನಲಾಗಿದೆ.
ಇತ್ತ ರಘು ನಾಪತ್ತೆಯಾಗಿರುವ ಕುರಿತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆ ವೇಳೆ ಶೃತಿಯ ಸಹೋದರಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಅನುಮಾನಾಸ್ಪದ ವಿಚಾರಗಳು ಬೆಳಕಿಗೆ ಬಂದಿವೆ. ಬಳಿಕ ಶೃತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣದ ಸತ್ಯಾಂಶ ಬಯಲಾಗಿದೆ ಎನ್ನಲಾಗಿದೆ.
ತನಿಖೆ ಮುಂದುವರಿಸಿದ ಪೊಲೀಸರು ಶೃತಿ, ಉಬೇದುಲ್ಲಾ ಹಾಗೂ ಸುರೇಶ್ನನ್ನು ಬಂಧಿಸಿದ್ದಾರೆ. ಸದ್ಯ ರಘುವಿನ ಮೃತದೇಹಕ್ಕಾಗಿ ತುಂಗಭದ್ರಾ ನದಿಯಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಸಂಬಂಧ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ನಡೆದಿರುವುದು ಹೇಗೆ, ಮೃತದೇಹವನ್ನು ನದಿಗೆ ಎಸೆಯಲು ಬಳಸಿದ ವಾಹನ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಇತರ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



