ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ₹1.5 ಕೋಟಿ ಮೊತ್ತದ ‘ಬಾಸ್ ಸ್ಕ್ಯಾಮ್’ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರೀ ಸೈಬರ್ ಅಪರಾಧ ಜಾಲವೊಂದು ಪತ್ತೆಯಾಗಿದೆ. ಸೈಬರ್ ಅಪರಾಧಗಳಿಗೆ ಬಳಸಲಾಗುತ್ತಿದ್ದ ಸುಮಾರು 4,500 ಸಿಮ್ ಕಾರ್ಡ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಜಾಲಕ್ಕೆ ಚೀನಾ ಮತ್ತು ಪಾಕಿಸ್ತಾನದೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.
ಈ ಬೆನ್ನಲ್ಲೇ ದೇಶದಾದ್ಯಂತ ಸಿಮ್ ಕಾರ್ಡ್‌ಗಳನ್ನು ಖರೀದಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ಸೈಬರ್ ವಂಚನೆ ತಡೆಯುವ ಸಲುವಾಗಿ ಹೊಸ ಸಿಮ್ ಕಾರ್ಡ್‌ಗಳ ವಿತರಣಾ ಪ್ರಕ್ರಿಯೆಯನ್ನು ಬಿಗಿಗೊಳಿಸಿರುವ ಕೇಂದ್ರ, ನಕಲಿ ಸಿಮ್‌ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಿಮ್ ವಿತರಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಿದೆ.
ಟೆಲಿಕಾಂ ಕಂಪನಿಗಳು ಗ್ರಾಹಕರ ವಿವರಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಪರಿಶೀಲಿಸಬೇಕಿದ್ದು, ಅನುಮಾನಾಸ್ಪದ ಅಥವಾ ನಕಲಿ ಗುರುತಿನ ದಾಖಲೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೊಸ ಸಿಮ್ ಸಂಪರ್ಕ ನೀಡುವುದನ್ನು ತಡೆಯಲಾಗುತ್ತದೆ. ಇದಲ್ಲದೆ, ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ನೋಂದಣಿಯಾಗಿವೆ ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಟ್ರ್ಯಾಕ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಹೊಂದಲು ಅವಕಾಶವಿದ್ದು, ಜಮ್ಮು-ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಈ ಮಿತಿ ಗರಿಷ್ಠ 6 ಸಿಮ್ ಕಾರ್ಡ್‌ಗಳಿಗೆ ಸೀಮಿತವಾಗಿರಲಿದೆ.
ನಕಲಿ ಗುರುತಿನ ಆಧಾರದ ಮೇಲೆ ಸಿಮ್ ಕಾರ್ಡ್ ಪಡೆಯುವುದು, ಸೈಬರ್ ವಂಚನೆ ನಡೆಸುವುದು ಹಾಗೂ ಡಿಜಿಟಲ್ ಅರೆಸ್ಟ್‌ನಂತಹ ವಂಚನೆಗಳಿಗೆ ಬಳಸಲಾಗುವ ನಕಲಿ ಸಂಪರ್ಕಗಳನ್ನು ನಿಯಂತ್ರಿಸುವುದೇ ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಹೊಸ ಸಿಮ್ ಕಾರ್ಡ್ ಖರೀದಿಗೆ ಟಫ್ ರೂಲ್ಸ್:
- ಹೊಸ ಸಿಮ್ ಕಾರ್ಡ್ ನೀಡುವ ಮೊದಲು ರಿಯಲ್‌ಟೈಮ್ ಪರಿಶೀಲನೆ ಕಡ್ಡಾಯ
- ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರ ವಿವರ ಪರಿಶೀಲನೆ
- ನಕಲಿ ಗುರುತಿನ ವ್ಯಕ್ತಿಗಳಿಗೆ ಸಿಮ್ ನಿರ್ಬಂಧ
- ವ್ಯಕ್ತಿಯ ಹೆಸರಿನ ಸಿಮ್ ಸಂಖ್ಯೆ ಸರ್ಕಾರದಿಂದ ಟ್ರ್ಯಾಕಿಂಗ್
- ಗರಿಷ್ಠ 9 ಸಿಮ್ (ಜೆ&ಕೆ, ಈಶಾನ್ಯ ರಾಜ್ಯಗಳಲ್ಲಿ 6 ಸಿಮ್ ಮಿತಿ)



