ಹೊಸಪೇಟೆ/ವಿಜಯನಗರ: ಪ್ರವಾಸಕ್ಕೆಂದು ಹಂಪಿಗೆ ಆಗಮಿಸಿದ್ದ ತಾಯಿ–ಮಗಳು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೂಳೆಕೆರೆ ಗ್ರಾಮದ ಶಾಹೀನ್ (38) ಹಾಗೂ ಅವರ ಪುತ್ರಿ ಯಾಸ್ಮೀನ್ (13) ನಾಪತ್ತೆಯಾಗಿರುವವರು.
ಸಂಬಂಧಿಕರೊಂದಿಗೆ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಕುಟುಂಬ, ನದಿಯ ಸ್ನಾನಘಟ್ಟದ ಬಳಿ ಅಡುಗೆ ಮಾಡಿಕೊಂಡಿತ್ತು. ಬಳಿಕ ತಾಯಿ–ಮಗಳು ಸ್ನಾನಕ್ಕೆ ತೆರಳಿದ್ದ ವೇಳೆ ಇಬ್ಬರೂ ಕಾಲು ಜಾರಿ ತುಂಗಭದ್ರಾ ನದಿಗೆ ಬಿದ್ದು ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಹಾಗೂ ಆಳ ಹೆಚ್ಚಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಕ್ಕೆ ತೊಂದರೆಯಾಗುತ್ತಿದೆ.
ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ನಾಪತ್ತೆಯಾಗಿರುವ ತಾಯಿ–ಮಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆ ಹಂಪಿ ಪ್ರವಾಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.



