ಮಂಡ್ಯ: ಮಂಡ್ಯದ ಕಂಪು ಖ್ಯಾತಿಯ ಅಚ್ಚ ಬೆಲ್ಲ ಈಗ ಅಕ್ಷರಶಃ ಬಂಗಾರವಾಗಿದೆ. ರಾಜ್ಯದಲ್ಲಿ ತಾಂಡವವಾಡುತ್ತಿರುವ ಬರಗಾಲದ ಛಾಯೆ ಕಾವೇರಿ ನಾಡಿನ ರೈತರನ್ನು ಹೈರಾಣಾಗಿಸಿದ್ದು, ಇದರ ನೇರ ಬಿಸಿ ಈಗ ಮಾರುಕಟ್ಟೆಯಲ್ಲಿ ಬೆಲ್ಲದ ಬೆಲೆಯ ಮೇಲೆ ತಟ್ಟಿದೆ.
ಇತಿಹಾಸದಲ್ಲೇ ಎಂದೂ ಕಂಡಿರದ ರೀತಿಯಲ್ಲಿ ಮಂಡ್ಯದ ಬೆಲ್ಲದ ದರ ದಾಖಲೆಯ ಏರಿಕೆ ಕಂಡಿದೆ. ಈ ಹಿಂದೆ ಕ್ವಿಂಟಾಲ್‌ಗೆ 4,500 ರೂ. ಇದ್ದ ಬೆಲ್ಲದ ದರ, ಕಳೆದ ಎರಡು-ಮೂರು ದಿನಗಳಲ್ಲಿ ಬರೋಬ್ಬರಿ 2,000 ರೂ. ಏರಿಕೆಯಾಗಿ ಈಗ 6,500 ರೂ.ನಿಂದ 7,000 ರೂ.ವರೆಗೆ ಹರಾಜಾಗುತ್ತಿದೆ.
ಕಳೆದ ಆರು ತಿಂಗಳಿಂದ ಮಳೆಯಿಲ್ಲದೆ ಹಾಗೂ ಕಬ್ಬಿಗೆ ನೀರಿನ ಪೂರೈಕೆಯಾಗದೆ ಗದ್ದೆಗಳು ಒಣಗಿ ನಿಂತಿವೆ. ಪರಿಣಾಮ ಕಬ್ಬಿನ ಇಳುವರಿ ಅರ್ಧದಷ್ಟು ಕುಸಿದಿದ್ದು, ಗಾಣಗಳಿಗೆ ಕಬ್ಬು ಸಿಗದೆ ಉತ್ಪಾದನೆ ಸಂಪೂರ್ಣ ಕುಂಠಿತಗೊಂಡಿದೆ. ಹಿಂದೆ ಪ್ರತಿದಿನ 10ರಿಂದ 12 ಲಾರಿಗಳಷ್ಟು ಮಾರುಕಟ್ಟೆಗೆ ಹೋಗುತ್ತಿದ್ದ ಬೆಲ್ಲದ ಪೂರೈಕೆ ಈಗ ಅರ್ಧದಷ್ಟು ಇಳಿಕೆಯಾಗಿದೆ.
ಬೆಲ್ಲದ ಮಾರುಕಟ್ಟೆ ಪ್ರಾರಂಭವಾದ ದಿನದಿಂದಲೂ ಈ ಮಟ್ಟಿಗೆ ದರ ಏರಿಕೆಯಾಗಿರಲಿಲ್ಲ. ಈ ಸೀಸನ್‌ನಲ್ಲಿ ಬೆಲೆ ತಗ್ಗಬೇಕಿತ್ತಾದರೂ, ಇಷ್ಟು ಭಾರೀ ಏರಿಕೆ ಕಂಡಿರುವುದು ಇದೇ ಮೊದಲು ಎಂದು ವ್ಯಾಪಾರಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮಳೆಯಾಶ್ರಿತ ಹಾಗೂ ನೀರಾವರಿಯಿಲ್ಲದೆ ಒಣಗಿದ ಕಬ್ಬಿನ ಬೆಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದರೆ, ಕಚ್ಚಾ ವಸ್ತು ಸಿಗದೆ ಬೆಲ್ಲದ ದರ ಗಗನಕ್ಕೇರಿರುವುದು ಸಾಮಾನ್ಯ ಜನರಿಗೂ ಬಿಸಿ ತಟ್ಟುವಂತೆ ಮಾಡಿದೆ.



